ಜಾತಿಗಣತಿಯಲ್ಲಿ ಕೊರಚ, ಕೊರಮ ಬರೆಸಲು ಸಮಾಜಕ್ಕೆ ಕರೆ

| Published : May 07 2025, 12:50 AM IST

ಸಾರಾಂಶ

A call to the society to write blanks and blanks in the caste census

-ಅನಕ್ಷರಸ್ಥ ಕೊರಮ, ಕೊರಚ ಸಮಾಜಕ್ಕೆ ಸ್ಪಂದಿಸಲು ಆಯೋಗಕ್ಕೆ ಕಿರಣ ಕೊತ್ತಗೆರೆ ಮನವಿ । ಜಾತಿಗಣತಿ ಸಮೀಕ್ಷಾ ಸಿಬ್ಬಂದಿಗೆ ಮಾಹಿತಿ ನೀಡಲು ಮನವಿ

----

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಮೇ5ರಿಂದ ಆರಂಭವಾದ ಜಾತಿಗಣತಿಯಲ್ಲಿ ಜಿಲ್ಲೆಯ ಕೊರಮ-ಕೊರಚ ಸಮಾಜ ಬಾಂಧವರು ಕಡ್ಡಾಯವಾಗಿ ಕುಟುಂಬದ ನಿಖರ ನೈಜ ಮಾಹಿತಿಯನ್ನು ಸಮೀಕ್ಷಾ ಅಧಿಕಾರಿ, ಸಿಬ್ಬಂದಿಗೆ ನೀಡಿ, ಸಹಕರಿಸುವಂತೆ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರವನ್‌, ಕೇಪ್‌ ಮಾರಿಸ್‌ ವೈಜ್ಞಾನಿಕ ಒಳ ಮೀಸಲಾತಿ ಅನುಷ್ಟಾನ ಹೋರಾಟ ಸಮಿತಿ ರಾಜ್ಯ ಘಟಕ ಕರೆ ನೀಡಿದೆ.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಸಂಚಾಲಕ, ವಕೀಲ ಕಿರಣಕುಮಾರ ಕೊತ್ತಗೆರೆ, ಪರಿಶಿಷ್ಟ ಜಾತಿಯ ಕೊರಚ, ಕೊರಮ ಬಾಂಧವರು ಕೆಲವು ಕಾರಣಗಳಿಂದಾಗಿ ತಮ್ಮ ಜಾತಿ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುತ್ತಿದ್ದು, ಯಾವುದೇ ಕಾರಣಕ್ಕೂ ಹಿಂಜರಿಕೆ, ಮುಜುಗರ ಮಾಡಿಕೊಳ್ಳದೇ, ಸಮೀಕ್ಷೆದಾರರು ಮನೆ ಬಾಗಿಲಿಗೆ ಬಂದ ವೇಳೆ ಸಮಾಜದ ಮಕ್ಕಳು, ಸಮಾಜಕ್ಕೆ ಒಳ ಮೀಸಲಾತಿ ಪಡೆಯಲು ಸೂಕ್ತ ಮಾಹಿತಿ ನೀಡಿ, ಶಕ್ತಿ ತುಂಬಬೇಕು ಎಂದರು.

ಸಮೀಕ್ಷೆ ವೇಳೆ ಸಮಾಜ ಬಾಂಧವರು ಕೊರಚ ಸಮುದಾಯದವರು ಕ್ರಮ ಸಂಖ್ಯೆ 53 ಹಾಗೂ ಕೊರಮ ಸಮುದಾಯದವರು ಕ್ರಮ ಸಂಖ್ಯೆ 54ರಲ್ಲಿ ಕೊರಮ ಎಂಬುದಾಗಿ ಮರೆಯದೇ ಬರೆಸಬೇಕು ಎಂದು ಮನವಿ ಮಾಡಿದರು.

ರಾಜ್ಯಾದ್ಯಂತ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಬೇಕೆಂಬ ಸದುದ್ದೇಶದಿಂದ ಜಾತಿಗಣತಿಗೆ ಸರ್ಕಾರ ಮುಂದಾಗಿದ್ದು, ಇಂತಹ ಅವಕಾಶವನ್ನು ಸಮಾಜ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವು ಜಾತಿ ಗಣತಿ ವೇಳೆ 48 ಮಾನದಂಡಗಳನ್ನು ಹೇಳಿದೆ. ಅನಕ್ಷರಸ್ಥರು, ಕಡು ಬಡವರಾದ ಕೊರಮ, ಕೊರಚ ಸಮುದಾಯದ ಜಾತಿ ಗಣತಿ ವೇಳೆ ಗಣತಿದಾರರು ಸೂಕ್ತವಾಗಿ ಸ್ಪಂದಿಸಬೇಕು. ಸಮಾಜದ ಸಂಘ-ಸಂಸ್ಥೆಗಳು, ತಮ್ಮ ಸಮಿತಿ, ಸಮಾಜದ ಮುಖಂಡರು, ವಿವಿಧ ಪಕ್ಷಗಳು, ಸಂಘಟನೆಗಳಲ್ಲಿ ಗುರುತಿಸಿಕೊಂಡವರು, ಅಧಿಕಾರಿ, ನೌಕರರು, ಖಾಸಗಿ ನೌಕರರು, ವಿದ್ಯಾವಂತರು, ಯುವ ಜನರು ಸಮಾಜಕ್ಕೆ ಜಾತಿಗಣತಿ ವೇಳೆ ಆಯಾ ಭಾಗದಲ್ಲಿ ಸಮಾಜ ಬಾಂಧವರಿಗೆ ಅರಿವು ಮೂಡಿಸಬೇಕು ಎಂದು ಕಿರಣಕುಮಾರ ಮನವಿ ಮಾಡಿದರು.

ಸಮಿತಿ ರಾಜ್ಯ ಸಂಚಾಲಕ ವಿರೂಪಾಕ್ಷಪ್ಪ ಪಂಡಿತ್‌, ಹಿರಿಯ ಪತ್ರಕರ್ತ ಕೆ.ಆರ್.ಗಂಗರಾಜ್, ಪ್ರೊ.ಆನಂದಪ್ಪ, ಕೆ.ಜಿ.ಮಂಜುನಾಥ, ಶೇಖರಪ್ಪ ಹರಪನಹಳ್ಳಿ, ಸಿದ್ಧಾರ್ಥ ಕೃಷ್ಣ ಇದ್ದರು.

--

ಫೋಟೊ: ದಾವಣಗೆರೆಯಲ್ಲಿ ಮಂಗಳವಾರ ಕರ್ನಾಟಕ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರವನ್‌, ಕೇಪ್‌ ಮಾರಿಸ್‌ ವೈಜ್ಞಾನಿಕ ಒಳ ಮೀಸಲಾತಿ ಅನುಷ್ಟಾನ ಹೋರಾಟ ಸಮಿತಿ ರಾಜ್ಯ ಸಂಚಾಲಕ, ವಕೀಲ ಕಿರಣಕುಮಾರ ಕೊತ್ತಗೆರೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.----

ಪೋಟೊ: 6ಕೆಡಿವಿಜಿ3