ನಾಡಿನ ಉದ್ಧಾರಕ್ಕಾಗಿ ಬದುಕು ಮುಡಿಪಾಗಿಟ್ಟ ಶಿವಬಸವ ಶ್ರೀ

| Published : May 07 2025, 12:50 AM IST

ನಾಡಿನ ಉದ್ಧಾರಕ್ಕಾಗಿ ಬದುಕು ಮುಡಿಪಾಗಿಟ್ಟ ಶಿವಬಸವ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಬಸವ ಶ್ರೀಗಳು ಶಿವಯೋಗದ ಸಾರ್ವಭೌಮರಾಗಿ ಈ ನಾಡಿನ ಉದ್ಧಾರಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹಾನ್ ಸಂತ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಿವಯೋಗದ ಮೂಲ ತತ್ವವೇ ಶಿವನ ಜೊತೆ ಸೇರುವುದು ಎಂದರ್ಥ. ಅನಂತವಾಗಿರುವ ಶಿವನಲ್ಲಿ ಒಂದಾಗುವುದೇ ಶಿವಯೋಗದ ಮೂಲ ಆಶಯ. ಶಿವಬಸವ ಶಿವಯೋಗಿಗಳು ಶಿವಯೋಗದ ಸಾರ್ವಭೌಮ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.

ಸಪ್ತಸಾಗರ ಗ್ರಾಮದಲ್ಲಿ ಶಿವಬಸವ ಗುರುಮಂದಿರ ಲೋಕಾರ್ಪಣೆ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರರಂಗದಲ್ಲಿ ಹೇಗೆ ಡಾ.ರಾಜಕುಮಾರ್ ಅವರು ತಮ್ಮ ನಟನಾ ಕೌಶಲ್ಯದಿಂದ ನಟ ಸಾರ್ವಭೌಮ ಎಂದು ಗುರುತಿಸಿಕೊಂಡರು ಹಾಗೆಯೇ ಶಿವಬಸವ ಶ್ರೀಗಳು ಶಿವಯೋಗದ ಸಾರ್ವಭೌಮರಾಗಿ ಈ ನಾಡಿನ ಉದ್ಧಾರಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹಾನ್ ಸಂತ. ಶಿವಬಸವ ಶ್ರೀಗಳು ತಮ್ಮ ಪವಾಡದಿಂದ ಈ ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವರು ಎಂದರು.

ದೂರದ ಹಾವೇರಿಯನ್ನು ಅಥಣಿಯ ಸಪ್ತಸಾಗರಕ್ಕೆ ಬೆಸೆದ ಕೀರ್ತಿ ಶಿವಬಸವ ಶ್ರೀಗಳಿಗೆ ಸಲ್ಲುತ್ತದೆ. ಬದುಕಿನುದ್ದಕ್ಕೂ ಸಮಾಜದ ಜನರ ಉದ್ಧಾರಕ್ಕಾಗಿ ದುಡಿದು ಶಿವನನ್ನೇ ಒಲಿಸಿಕೊಂಡ ಮಹಾನ್ ಸಂತ ಅವರು. ಸಪ್ತಸಾಗರ ಗ್ರಾಮದಲ್ಲಿ ಶಿವಬಸವ ಶ್ರೀಗಳ ಗುರುಮಂದಿರ ಲೋಕಾರ್ಪಣೆ ಅತ್ಯಂತ ಖುಷಿ‌ ನೀಡಿದೆ. ಇದೇ ರೀತಿಯಲ್ಲಿ ಮುಂದೆಯೂ‌ ಈ ಗ್ರಾಮದಲ್ಲಿ ನಿರಂತರ ಶಿವಬಸವ ಶ್ರೀಗಳ ಕಾರ್ಯಕ್ರಮ ಜರುಗಲಿ ಎಂದು ಹಾರೈಸಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತಮಾಡಿ, ಶಿವಬಸವ ಮಹಾಸ್ವಾಮೀಜಿ ಪವಾಡ ಪುರುಷರು. ಆಧ್ಯಾತ್ಮಿಕ ಮೇರು ಪರ್ವತವಾಗಿ ಈ ನಾಡಿನ ಉದ್ಧಾರಕ್ಕಾಗಿ ಹಗಲಿರುಳು ದುಡಿದ ಸಂತ. ಅಂತಹ ಮಹಾನ್ ವ್ಯಕ್ತಿಯ ಹುಟ್ಟೂರಿನಲ್ಲಿ ಭಾವೈಕ್ಯತೆಯಿಂದ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಂತಸದ ಕ್ಷಣ ಎಂದರು.

ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ ಮಾತನಾಡಿ. ಬಸವಾದಿ ಶರಣರ ಹಾದಿಯಲ್ಲಿ ನಡೆದ ಶಿವಬಸವ ಶ್ರೀಗಳು ಬೆಳಗಾವಿ ಪುಣ್ಯಭೂಮಿಯಿಂದ ಹಾವೇರಿ ವರೆಗೆ ತಮ್ಮ ಛಾಪು‌ ಮೂಡಿಸಿದವರಲ್ಲಿ ಒಬ್ಬರು. ಇವರ ನೆನಪಿನಲ್ಲಿ ಸಪ್ತಸಾಗರ ಗ್ರಾಮದ ಜನ ಶಿವಬಸವ ಗುರುಮಂದಿರ ಲೋಕಾರ್ಪಣೆ ‌ಗೊಳಿಸಿದ್ದು ಅತ್ಯಂತ ಖುಶಿ ವಿಚಾರ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗೋಣ ಎಂದರು.

ಈ ಸಂದರ್ಭದಲ್ಲಿ ಶಿವಬಸವರಾಜ ಬಿ.ಬೆಳಗಾವಿ ಅವರು ರಚಿಸಿದ ಶಿವಯೋಗ ಸಾರ್ವಭೌಮ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಮಹಾಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ, ಮುಖಂಡರಾದ ಸಂಜಯ್ ನಾಡಗೌಡ, ಅಶೋಕ ಐಗಿಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಭ್ರಮದ ಶಿವಬಸವ ಗುರುಮಂದಿರ ಲೋಕಾರ್ಪಣೆ

ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶಿವಬಸವ ಗುರುಮಂದಿರ ಕಾರ್ಯಕ್ರಮ ಸೋಮವಾರ ಬೆಳಗ್ಗೆ ಅದ್ಧೂರಿಯಾಗಿ ಜರುಗಿತು. ಶಿವಬಸವ ಶ್ರೀಗಳ ಮೂರ್ತಿ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಂತರ ಗುರುಮಾತೆಯರಿಂದ ಶಿವಬಸವ ಶ್ರೀಗಳ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಜರುಗಿತು.‌

ಮಧ್ಯಾಹ್ನ ಜರುಗಿದ ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ರಾಜು ಕಾಗೆ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು. ಹಾವೇರಿಯ ಹುಕ್ಕೇರಿ ಮಠದಿಂದ ಆಗಮಸಿದ ಭಕ್ತರು ಶಿವಬಸವ ಶ್ರೀಗಳ ಗದ್ದುಗೆ ಅಶಿರ್ವಾದ ಪಡೆದರು. ಐದು ದಿನಗಳ ವರೆಗೆ ನಡೆದ ಶಿವಬಸವ ಗುರುಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಯಶಸ್ಸಿನ ಕುರಿತು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.