ಅರಬ್ಬಿ ಸಮುದ್ರದಿಂದ ಸಿಂಗಾಪುರದ ತಟ್ಟೆಗೆ ಅಂಕೋಲಾ ಏಡಿ
ಮಾದನಗೇರಿಯ ಏಡಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾಅರಬ್ಬಿ ಸಮುದ್ರದ ನದಿ ಸಂಗಮ ಪಾತ್ರಗಳಲ್ಲಿ ಕಂಡು ಬರುವ ‘ಕಲ್ಲು ಜೆಂಜಿ’ (ಕ್ರಾಬ್) ಏಡಿಗೆ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಬಂದಿದೆ!
ಅಂಕೋಲಾದ ಮಾದನಗೇರಿಯಿಂದ ವಿದೇಶಿಗರ ನೆಲಕ್ಕೆ ವಿಶೇಷವಾಗಿ ರಪ್ತಾಗುವ ಈ ಏಡಿ ಮೀನುಗಾರರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಿದೆ. ಏಡಿಗೇನೊ ಭಾರಿ ಬೆಲೆ ಬಂದಿದೆ. ಆದರೆ ಏಡಿಗಳು ಸಂಖ್ಯೆ ಮಾತ್ರ ಕ್ಷೀಣಿಸ ತೊಡಗಿದೆ.
ವಿಮಾನ ಏರುವ ಏಡಿಗಳು;
ಉಕ ಜಿಲ್ಲೆಯ ಅಂಕೋಲಾದ ಮಾದನಗೇರಿ, ಬೇಲೆಕೇರಿ, ತದಡಿ, ಹೊಸ್ಕಟಾ, ಅಘನಾಶಿನಿ, ಬಾಡಾ, ಕಾಗಾಲ, ಕುಮಟಾ, ಹೊನ್ನಾವರ ಭಾಗಗಳ ಸಮುದ್ರ ಸಂಗಮ ಹಾಗೂ ಪಾರ್ಮಗಳಲ್ಲಿ ಬೆಳೆಸಿದ ಏಡಿಗಳು ಮಂಗಳೂರು ಹಾಗೂ ಚೆನ್ನೈ ಮೂಲಕ ಸಿಂಗಾಪುರ, ಥೈಲ್ಯಾಂಡ್ ಹಾಗೂ ಮಲೇಶಿಯಾಕ್ಕೆ ವಿಮಾನದಲ್ಲಿ ರಪ್ತು ಆಗುತ್ತಿವೆ.ನದಿಗಳು ಸಮುದ್ರ ಪ್ರವೇಶಿಸುವ ಅಳಿವೆ ಬಾಗಿಲು ಮತ್ತು ಹಿನ್ನೀರು ಪ್ರದೇಶದಲ್ಲಿ ಲಭ್ಯವಾಗುವ ಕ್ರಾಬ್ (ಏಡಿಗಳು) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಅತ್ಯಧಿಕ ಪ್ರೊಟೀನ್‌ಗಳುಳ್ಳ ತಿನ್ನಲು ರುಚಿಕರವಾದ ಈ ಸಿಹಿ ನೀರಿನ ಏಡಿಗಳು ಮುಖ್ಯವಾಗಿ ಆಗ್ನೇಯೇಷ್ಯಾ ದೇಶಗಳಾದ ಸಿಂಗಾಪುರ, ತೈವಾನ್, ಮಲೇಶಿಯಾ, ಹಾಂಕಾಂಗ್ ಮತ್ತು ಚೀನಾ ಜನತೆಗೆ ಬಲು ಇಷ್ಟದ ತಿನಿಸಾಗಿವೆ.
ಸ್ಥಳೀಯವಾಗಿ ಈ ಎಡಿ ಕೆಜಿಗೆ 2000 ರು. ಬೆಲೆ ಇದ್ದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 3500 ಇದೆ ಎನ್ನಲಾಗಿದೆ.ಕೆಸರು ನೆಲದಲ್ಲಿ ಒಸರು ಏಡಿ:
ಇಂಗ್ಲಿಷ್‌ನಲ್ಲಿ ಮಡ್ ಕ್ರ್ಯಾಬ್ ಎಂದು ಕರೆಯಲಾಗುವ ಏಡಿಯನ್ನು ಅಂಕೋಲಾದಲ್ಲಿ ಕರಿ ಏಡಿ ಎಂದೂ ಕರೆಯುವುದುಂಟು. ಗಾತ್ರಕ್ಕೆ ಅನುಗುಣವಾಗಿ ಎಕ್ಸೆಲ್ (ಭಾರಿ ಗಾತ್ರ), ಬಿಗ್ (ದೊಡ್ಡ) ಮತ್ತು ಮೀಡಿಯಂ (ಮಧ್ಯಮ) ಎಂದು ವರ್ಗೀಕರಿಸಲಾಗಿದೆ. ಏಡಿಯ ಗುಣಮಟ್ಟಕ್ಕೆ ಅನುಗುಣವಾಗಿ ಸಾಮಾನ್ಯ ನಸುಗಪ್ಪು ಮತ್ತು ಕಡುಹಸಿರು ಬಣ್ಣದ ಏಡಿಗಳಿಗೆ ಬೇಡಿಕೆಯಿದೆ. ದೊಡ್ಡ ಗಾತ್ರ ಏಡಿಯೊಂದು ಗರಿಷ್ಟ ಮೂರುವರೆ ಕೆಜಿ ತೂಗಿದರೆ, ಒಂಬತ್ತು ಇಂಚಿನಷ್ಟು ಅಗಲದ ತನಕವು ಬೆಳೆಯುತ್ತದೆ. ಏಳು ದಿನಗಳವರೆಗೆ ಭೂಮಿಯ ಮೇಲೆ ಉಸಿರಾಡುವ ಸಾಮರ್ಥ್ಯ ಈ ಏಡಿಗಿದೆ. ಈ ಅವಧಿಯೊಳಗೆ ಏಡಿಗಳು ವಿದೇಶಕ್ಕೆ ಸಾಗಿಸಲಾಗುತ್ತದೆ.ಸಜೀವವಾಗಿಯೇ ರಪ್ತು:
ಉಕ ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ ಒಂದು ಟನ್‌ಗೂ ಜಾಸ್ತಿ ಏಡಿ ರಪ್ತಾಗುತ್ತಿವೆ. ಏಡಿಗಳನ್ನು ಹಿಡಿದು ಗಾಳಿಯಾಡುವ ಬುಟ್ಟಿಯೊಳಗೆ ಸಜೀವವಾಗಿಯೇ ರಪ್ತು ಮಾಡಲಾಗುತ್ತದೆ. ಇಂತಹ ಸಜೀವ ಏಡಿಗಳಿಗೆ ಮಾತ್ರ ಭಾರಿ ಬೇಡಿಕೆ ಇರುತ್ತದೆ. ಏಡಿಗಳ ಶರೀರದ ಯಾವುದೇ ಅಂಗಾಂಗ ಸ್ವಲ್ಪವೂ ಊನವಾಗಿರಬಾರದು. ಏಡಿಗಳು ನಿರ್ಜೀವವಾಗಿದ್ದರೆ ಅಥವಾ ಅಂಗ ಆಕಸ್ಮಿಕವಾಗಿ ತುಂಡಾಗಿದ್ದರೆ ಅವುಗಳ ಬೆಲೆ ಇಳಿಯುತ್ತಾ ಹೋಗುತ್ತದೆ. ಕೆಲವೊಮ್ಮೆ ನಾನಾ ಕಾರಣಕ್ಕೆ ಏಡಿಗಳು ತಿರಸ್ಕೃತವಾಗುವುದೂ ಇದೆ. ಏಡಿಗಳು ತಮ್ಮ ಎರಡು ಕಾಲುಗಳಲ್ಲಿರುವ ಹರಿತ ದವಡೆಗಳಿಂದ ಕಚ್ಚಿ ತುಂಡರಿಸುವ ಮೂಲಕ ಯಾವುದೇ ಬಲೆ, ಸೆರೆಗಳಿಂದ ತಪ್ಪಿಸಿಕೊಳ್ಳುತ್ತವೆ. ಹೀಗಾಗಿ ಪ್ರತಿಯೊಂದು ಏಡಿಯ ಕಾಲುಗಳನ್ನು ಕಟ್ಟಿ ಹಾಕಿಯೇ ರಪ್ತಿಗೆ ಸಿದ್ಧಪಡಿಸಲಾಗುತ್ತದೆ.ಬೆಳೆಗಾರರಿಗೆ ಸೂಕ್ತ ಬೆಲೆಯಿಲ್ಲ:
ವಿದೇಶಿಗರ ಬಾಯಲ್ಲಿ ನೀರಿರುಸುವ ಏಡಿಗಳ ಬಲಿಷ್ಠ ಕಾಲುಗಳು ನಾನಾ ವಿಧದ ಸೂಪ್ ತಯಾರಿಕೆಗೂ ಬಳಸಲಾಗುತ್ತದೆ. ಆದರೆ ಇಲ್ಲಿನ ಮೀನುಗಾರರು ನೆರವಾಗಿ ವಿದೇಶಕ್ಕೆ ರಪ್ತು ಮಾಡಲು ಪರವಾನಿಗೆಯ ತಾಂತ್ರಿಕ ತೊಡಕುಗಳಿವೆ. ಹೀಗಾಗಿ ಏಜೆಂಟರ ಮೂಲಕ ಇಲ್ಲಿನ ಏಡಿಗಳು ಬೆಳೆಗಾರರಿಗೆ ಸೂಕ್ತ ಬೆಲೆಯಿಲ್ಲದೇ ವಿಮಾನ ಏರುತ್ತದೆ.ಈ ವರ್ಷ ಉತ್ತಮ ಬೆಳೆ;
ಮಾದನಗೇರಿಯ ಆನಂದು ಹರಿಕಂತ್ರ, ಭೈರವ ಹರಿಕಂತ್ರ ಹಾಗೂ ಮೋಹನ ಹರಿಕಂತ್ರ ಸಹೋದರರು ಕಳೆದ 34 ವರ್ಷದಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸಂದರ್ಭ ಲಾಕ್‌ಡೌನ್‌ನಿಂದ ವಿಮಾನ ರದ್ದಾಗಿ ಏಡಿ ಉದ್ಯಮ ಸಂಪೂರ್ಣ ಕುಸಿತ ಕಂಡಿತ್ತು. ಆದರೆ ಈಗ ವಿಮಾನ ಹಾರಾಟಕ್ಕೆ ಅವಕಾಶವಿರುವುದರಿಂದ ಏಡಿಗಳು ಸಹ ವಿದೇಶಗರ ಬಾಯಿ ರುಚಿಸಲು ರಪ್ತಾಗುತ್ತಿವೆ.ಸಂತತಿ ಕ್ಷೀಣ:
ಪರಿಸರ ವೈಪರೀತ್ಯ, ಸಮುದ್ರ ಮಾಲಿನ್ಯದ ಪರಿಣಾಮ ಏಡಿಗಳ ಸಂತತಿ ಕ್ಷೀಣಿಸುವಿಕೆಗೆ ಕಾರಣವಾಗಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ. ಏಡಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಪ್ರಕೃತಿಯ ಮುನಿಸಿಗೆ ಸಾಕ್ಷಿ ಒದಗಿಸಿದೆ.ಅನೇಕ ವರ್ಷಗಳಿಂದ ಇಲ್ಲಿನ ಕ್ರಾಬ್(ಏಡಿ) ಗಳನ್ನು ವಿದೇಶಕ್ಕೆ ಏಜೆಂಟ್‌ರ ಮೂಲಕ ರಪ್ತು ಮಾಡಲಾಗುತ್ತದೆ. ಈ ವರ್ಷ ಉತ್ತಮ ಬೆಲೆ ಕೂಡ ಬಂದಿದೆ. ಆದರೂ ಬರುಬರುತ್ತ ಏಡಿಗಳ ಸಂಖ್ಯೆಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಮಾದನಗೇರಿಯ ಏಡಿ ಪೂರೈಕೆದಾರ ಭೈರವ ನಾಗಪ್ಪ ಹರಿಕಂತ್ರ.