ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಮಳೆಯ ವೇಳೆ ಶಾಲಾ ಕೊಠಡಿಗಳ ಚಾವಣಿ ಸೋರುತ್ತಿರುವ ಕಾರಣ ವಿದ್ಯಾರ್ಥಿಗಳು ತಗಡಿನ ಶೆಡ್‌ನಲ್ಲಿ ಪಾಠ ಆಲಿಸುವ ದುಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ತೀವ್ರ ಬಿಸಿಲು ಹಾಗೂ ಮಳೆಗಾಲದಲ್ಲಿ ಸದ್ದು ಮತ್ತು ನೀರು ಸೋರಿಕೆಯಿಂದ ಪಾಠ-ಪ್ರವಚನಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಸುರಕ್ಷಿತ ಕಟ್ಟಡದ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಧಕ್ಕೆ ಉಂಟಾಗಿದ್ದು, ಮಕ್ಕಳ ಭದ್ರತೆ ಬಗ್ಗೆ ಪಾಲಕರಲ್ಲಿ ಆತಂಕ ಹೆಚ್ಚಿದೆ.ತಾಲೂಕಿನ ತಾರಿಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಈ ಶಾಲೆಯಲ್ಲಿ ಒಂದರಿಂದ ಏಳನೇ ವರ್ಗದ ವರೆಗೆ ತರಗತಿಗಳು ನಡೆಯುತ್ತಿದ್ದು, ಕೇವಲ ೯೩ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಂಖ್ಯೆ ಇದೆ. ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸುವ ಭಯ ಕಾಡುತ್ತಿದೆ. ಇದರಿಂದ ಅನೇಕ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಪಡೆಯಬೇಕಾದ ಮಕ್ಕಳು ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿರುವುದರಿಂದ ಕೂಡಲೇ ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಿ, ಹಳೆಯ ಕಟ್ಟಡಗಳನ್ನು ದುರಸ್ತಿ ಮಾಡಿ, ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಅನುಕೂಲಕರ ಕಲಿಕಾ ವಾತಾವರಣ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡದೆ, ಸುರಕ್ಷಿತ ಶಾಲಾ ಕಟ್ಟಡ ಒದಗಿಸುವ ಮೂಲಕ ಪಾಲಕರ ಆತಂಕ ನಿವಾರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಶಾಲೆಯ ಕೆಲವು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದರೂ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ. ಮಳೆ ಬಂದಾಗ ತರಗತಿ ಕೊಠಡಿಗಳಲ್ಲಿ ನೀರು ಸೋರಿ ವಿದ್ಯಾರ್ಥಿಗಳ ಪುಸ್ತಕಗಳು ಮತ್ತು ಶಾಲಾ ಸಾಮಗ್ರಿಗಳು ಹಾಳಾಗುತ್ತಿವೆ. ಹೀಗಾಗಿ, ತಗಡಿನ ಶೆಡ್‌ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, ಅಲ್ಲಿ ಕೂಡ ಸೂಕ್ತ ಮೂಲಸೌಕರ್ಯದ ಕೊರತೆ ಇದೆ.
ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ ಹೊಸ ಶಾಲಾ ಕಟ್ಟಡ ನಿರ್ಮಿಸಬೇಕು ಅಥವಾ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮತ್ತು ಪಾಲಕರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಶಾಲಾ ಕೊಠಡಿಗಳು ದುರಸ್ತಿಯಲ್ಲಿರುವ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಡಿಡಿಪಿಐ ಆರ್‌ಎಂಎಸ್‌ಎ ಮತ್ತು ತಾಲೂಕು ಪಂಚಾಯಿತಿಗೂ ವರದಿ ಸಲ್ಲಿಸಲಾಗಿದೆ. ಅನುದಾನ ಮಂಜೂರಾಗಿ ಬಂದ ಬಳಿಕ ಸಮಸ್ಯೆ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಹೇಳಿದರು.
ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಇವರ ಕಾರ್ಯವೈಖರಿಗೆ ಶಾಲೆಯ ಹಾಜರಾತಿ ಸಂಪೂರ್ಣ ಕುಸಿದಿದ್ದು, ೧ನೇ ತರಗತಿಗೆ ಕೇವಲ ೬ ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ. ಇದೇ ವ್ಯವಸ್ಥೆ ಮುಂದುವರಿದರೆ ಸರ್ಕಾರಿ ಶಾಲೆ ಬಂದ್ ಆಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಲಕ್ಷ್ಮಣಗೌಡ್ರ ಪಾಟೀಲ.