ಶಿರಹಟ್ಟಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ನೈಪುಣ್ಯತೆ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಶಿಕ್ಷಣ ಪದ್ದತಿಯಲ್ಲಿಯೂ ಬದಲಾವಣೆಯಾಗಿದ್ದು, ವಿದ್ಯಾರ್ಥಿಗಳಿಗೆ ಜಗತ್ತಿನ ಸವಾಲುಗಳನ್ನು ಎದುರಿಸುವಂಥ ಶಿಕ್ಷಣವನ್ನು ಶಿಕ್ಷಕ ಸಮೂಹ ನೀಡಬೇಕಾಗಿದೆ ಎಂದು ಎಫ್.ಎಂ. ಡಬಾಲಿ ಶಿಕ್ಷಣ ಸಂಸ್ಥೆಯ ಚೇರಮನ್‌ ಡಿ.ಎನ್. ಡಬಾಲಿ ಹೇಳಿದರು.

ಎಫ್.ಎಮ್. ಡಬಾಲಿ ಶಿಕ್ಷಣ ಸಂಸ್ಥೆಯಲ್ಲಿ ನೆರವೇರಿದ ಸಂಸ್ಥಾಪಕರ ದಿನಾಚರಣೆಯಲ್ಲಿ ಸಂಸ್ಥಾಪಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.ಗ್ರಾಮೀಣ ಭಾಗದ ಬಡ ಹಿಂದುಳಿದ ಮಕ್ಕಳ ವಿದ್ಯಾರ್ಜನೆಗಾಗಿಯೇ ಸ್ಥಾಪಿತಗೊಂಡು, ೧೯೫೦ರಲ್ಲಿ ಆಗಿನ ಸಾಂಗ್ಲಿ ಸ್ಟೇಟ್ ಗೌರ್ಮೆಂಟ್‌ನ ಅವಧಿಯ ಸಂದರ್ಭದಲ್ಲಿ ೧೯೫೦ರಲ್ಲಿ ತನು, ಮನ ಧನದಿಂದ ಡಬಾಲಿ ಮನೆತನದವರು ಸುಮಾರು ೬೦೦ ಎಕರೆ ಭೂದಾನವನ್ನು ನೀಡುವ ಮೂಲಕ ಶಿರಹಟ್ಟಿಯಲ್ಲಿ ಶಿಕ್ಷಣ ಸಮಿತಿ ಅಸ್ತಿತ್ವಕ್ಕೆ ಬಂದಿತು ಎಂದರು.

ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳಿಗೆ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಈ ಭಾಗದ ಬಡ ಹಿಂದುಳಿದ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಯಾದ ಎಫ್.ಎಂ. ಡಬಾಲಿ ವಿದ್ಯಾಸಂಸ್ಥೆ ೭೪ ವರ್ಷಗಳನ್ನು ಪೂರೈಸಿ ೭೫ನೇ ವರ್ಷದ ಸೇವೆಯಲ್ಲಿದೆ. ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹಿರಿಮೆಯನ್ನು ಹೊಂದಿದೆ. ನಮ್ಮ ಸಂಸ್ಥೆಯಲ್ಲಿಯೇ ಕಲಿತ ಅನೇಕ ವಿದ್ಯಾರ್ಥಿಗಳು ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸಂಸ್ಥೆಗೆ ಕೀರ್ತಿ ತಂದಿರುವುದನ್ನು ಸ್ಮರಿಸಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ ಮಾತನಾಡಿ, ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಂಸ್ಥಾಪಕರು ಇಂದು ಬಹಳಷ್ಟು ಮಕ್ಕಳ ಬಾಳಿನಲ್ಲಿ ಜ್ಞಾನದ ಬೆಳಕನ್ನು ನೀಡಿದ್ದಾರೆ. ಸೌಲಭ್ಯಗಳು ಕಡಿಮೆ ಇದ್ದ ಅವಧಿಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ೭೫ ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆ ತನ್ನದೇ ಆದ ಮಹತ್ವವನ್ನ ಹೊಂದಿದೆ. ಅಂದಿನಿಂದ ಇಂದಿನ ವರೆಗೂ ಗುಣಾತ್ಮಕ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳಿಗಾಗಿ ಹಲವಾರು ರೀತಿಯ ಅನುಕೂಲತೆಗಳನ್ನು ಕಲ್ಪಿಸಿದೆ ಎಂದರು.

ಆಧುನಿಕ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಮನೋಧೈರ್ಯ ತುಂಬುವ ಮೂಲಕ ಶಿಕ್ಷಣ ಮೂಲಾರ್ಥವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕಾಗಿದೆ. ಜ್ಞಾನ ಮತ್ತು ಕಲಿಕೆಗೆ ಮಹತ್ವ ನೀಡುವ ದಿಸೆಯಲ್ಲಿ ಹಲವು ಮಾದರಿ ಪ್ರಕಾರಗಳನ್ನು ಬಳಸಿ ಮಕ್ಕಳಲ್ಲಿ ವಿಷಯದ ಸಮಗ್ರತೆ ಮತ್ತು ಆಸಕ್ತಿ ಹೆಚ್ಚಿಸಬೇಕು ಎಂದರು.


ಸಂಸ್ಥೆಯ ಆಡಳಿತಾಧಿಕಾರಿ ಐ.ಬಿ. ಬೆನಕೊಪ್ಪ ಮಾತನಾಡಿ, ಈ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಸಮಾಜದ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಈ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಂ.ಸಿ. ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಸುಧಾ ಹುಚ್ಚಣ್ಣವರ ಹಾಗೂ ಎನ್.ಆರ್. ಉಡಚಗೊಂಡ ಸಂಸ್ಥಾಪಕರಿಗೆ ನುಡಿ ನಮನ ಸಲ್ಲಿಸಿದರು.

ಶಿಕ್ಷಣ ಸಮಿತಿಯ ಸದಸ್ಯ ಗಿರೀಶ್ ಡಬಾಲಿ, ಡಾ. ಸುರೇಶ್ ಡಬಾಲಿ, ಶಿವನಗೌಡ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯೋಪಾಧ್ಯಾಯ ಆರ್.ಎಫ್. ಬಟಕುರ್ಕಿ, ನೌಶಾದ್ ಶಿಗ್ಲಿ, ಎಂ.ಎಂ. ನದಾಫ್, ಜಿ.ಕೆ. ಕರ್ಕಣ್ಣವರ, ಎಫ್.ಎ. ಬಾಬುಖಾನವರ, ಪಿ.ಎನ್. ಕುಲಕರ್ಣಿ, ಎಲ್.ಪಿ. ನಾಯಕ್, ಸುನಿಲ್ ಲಮಾಣಿ, ಕೃಷ್ಣಾ ಗೌಡರ್, ಪಿ.ವಿ. ಹೊಸೂರ್, ನಂದೀಶ್ ಕಾಳಗಿ, ಗಣೇಶ್ ಬಡಿಗನ್ನವರ್, ನೀಲಕಂಠ ಕಂಕನವಾಡಿ, ಸುಮಾ ದಾವಣಗೆರೆ, ಗೀತಾ ಶೆಳಕೆ ಇತರರು ಇದ್ದರು. ಎನ್. ಹನುಮರಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ್ ಶಿರುಂದ ನಿರೂಪಿಸಿದರು.