ಮಳೆಗೆ ತುಂಬಿ ಹರಿದ ಹಳ್ಳ, ಸಂಚಾರಕ್ಕೆ ಅಡ್ಡಿ

| Published : Jun 13 2024, 12:48 AM IST

ಸಾರಾಂಶ

ಆಳಂದ ತಾಲೂಕಿನಲ್ಲಿ ಬುಧವಾರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಅಲ್ಲಲ್ಲಿನ ಹಳ್ಳದ ನೀರು ಮತ್ತು ನಾಲಾಗಳು ತುಂಬಿ ಹರಿದಿವೆ.

ಕನ್ನಡಪ್ರಭ ವಾರ್ತೆ ಆಳಂದ

ತಾಲೂಕಿನಲ್ಲಿ ಬುಧವಾರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಅಲ್ಲಲ್ಲಿನ ಹಳ್ಳದ ನೀರು ಮತ್ತು ನಾಲಾಗಳು ತುಂಬಿ ಹರಿದಿವೆ.

ಬುಧವಾರ ಆಳಂದ ಮೇಲ್ಬಾಗದಲ್ಲಿ ಸುರಿದ ಧಾಕಾರಾಕಾರ ಮಳೆಯಿಂದ ಪಟ್ಟಣದ ಹೊರವಲಯದ ಡಿಗ್ರಿ ಕಾಲೇಜು ಮಾರ್ಗದ ಹಳ್ಳವು ಬೃಹತ್ ಪ್ರಮಾಣದಲ್ಲಿ ತುಂಬಿಹರಿದಿದೆ. ಈ ವೇಳೆ ಸಂಪೂರ್ಣವಾಗಿ ಸಂಚಾರ ಕಡಿತಗೊಂಡಿತು. ಇಲ್ಲಿ ಸಮಪರ್ಕ ಸೇತುವೆ ಇಲ್ಲದೆ ನೆರೆ ಹೊರೆಯ ಹೊಲಗಳಲ್ಲಿ ನೀರು ಹೊಕ್ಕು ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಹಾನಿಗೊಳಿಸಿದೆ ಎಂದು ರೈತ ಮಲ್ಲಿಕಾರ್ಜುನ ವಣದೆ ಅವರು ಅಳಲು ತೋಡಿಕೊಂಡಿದ್ದಾರೆ. ಬುಧವಾರ ಬೆಳಗಿನ ಜಾವ ಸುರಿದ ಮಳೆಯ ವಿವರ ಹವಾಮಾನ ಇಲಾಖೆಯು ಗುರುವಾರಕ್ಕೆ ಪ್ರಕಟಗೊಳಿಸುತ್ತದೆ.

ಮತ್ತೊಂದಡೆ ಆಳಂದ ಮಾರ್ಗದ ಉಮರಗಾ ಸುಲೆಪೇಟ್ ರಾಜ್ಯ ಹೆದ್ದಾರಿಗೆ ಪಟ್ಟಣದ ದಬ ದಬಿ ಸೇತುವೆ ಮೇಲ್ಮಭಾಗದಿಂದ ಪ್ರವಾಹ ಹರಿದ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಂತುಹೋಗಿ ಪ್ರಯಾಣಕ್ಕೆ ಜನ ಪರದಾಡಿದ್ದಾರೆ.

ತಡಕಲ್, ತಂಬಾಕವಾಡಿ ಮಧ್ಯದ ರಸ್ತೆ ಕಳೆದೆರಡು ವರ್ಷದಿಂದ ಸೂಕ್ತ ಸೇತುವೆ ನಿರ್ಮಾಣ ಇಲ್ಲದಕ್ಕೆ ರಸ್ತೆಗೆ ಹರಿದು ಬಂದ ನಾಲೆಯ ನೀರಿನಿಂದಾಗಿ ಹೆದ್ದಾರಿ ಕೊಚ್ಚಿಹೋಗಿದೆ. ಇದರಿಂದಾಗಿ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ದೂರದ ವಾಹನ ಸಂಚಾರ ಸೇರಿ ನೆರೆ ಹೊರೆಯ ವಾಹನಗಳ ಓಡಾಟಕ್ಕೆ ಸಂಚಕಾರವಾಗಿ ಪರಿಣಮಿಸಿದೆ.

ಮಳೆ ವಿವರ: ಜೂ.11ರಂದು ಆಳಂದ ವಲಯದಲ್ಲಿ 30.2 ಮಿ.ಮೀ, ಖಜೂರಿ 49.1 ಮಿ.ಮೀ, ನರೋಣಾ 10 ಮಿ.ಮೀ, ನಿಂಬರಗಾ, 1 ಮಿ.ಮೀ, ಸರಸಂಬಾ, 6.2 ಮಿ.ಮೀ, ಕೊರಳ್ಳಿ 5.3 ಮಿ.ಮೀ ಮಳೆಯಾದರೆ ಮಾದನಹಿಪ್ಪರಗಾ ಮಳೆ ಬಂದಿಲ್ಲ. 12ರಂದು ಆಳಂದ ವಲಯಕ್ಕೆ 66.2 ಮಿ.ಮೀ, ಖಜೂರಿ 77.5 ಮಿ.ಮೀ, ನರೋಣಾ 8.0 ಮಿ.ಮೀ, ನಿಂಬರಗಾಅ 18 ಮಿ.ಮೀ, ಮಾದನಹಿಪ್ಪರಗಾ 32.4 ಮಿ.ಮೀ, ಸರಸಂಬಾ 46 ಮಿ.ಮೀ, ಕೊರಳ್ಳಿ 20.2 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಬಿತ್ತನೆ ಮಳೆ ಪೂರಕ: ತಾಲೂಕಿನಲ್ಲಿ ಖಜೂರಿ, ಆಳಂದ, ಸರಸಂಬಾ, ಕೊರಳ್ಳಿ ಬಿತ್ತನೆಗೆ ಕೈಗೊಳ್ಳುವುದಕ್ಕಿಂತ ಹೆಚ್ಚಿನ ಮಳೆಯಾದರೆ, ಇನ್ನೂಳಿದ ನರೋಣಾ, ನಿಂಬರಗಾ ಮಾದನಹಿಪ್ಪರಗಾ ವಲಯದಲ್ಲಿ ಸುರಿದ ಮಳೆ ಬಿತ್ತನೆಗೆ ಪೂರಕವಾಗಿ ಪರಿಣಮಿಸಿದೆ.

ರಸ್ತೆ ಸಂಪರ್ಕ ಅಲ್ಲಲಿ ಕಡಿತ: ಈ ಮಳೆಯಿಂದಾಗಿ ತಾಲೂಕಿನ ಆರು ಗ್ರಾಮಗಳಲ್ಲಿನ ಸಂಪರ್ಕ ರಸ್ತೆಗಳ ಕಡಿತಗೊಂಡಿವೆ, ಸರಿಪಡಿಸಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಜಿಪಂ ಎಇಇ ಸಂಗಮೇಶ ಬಿರಾದಾರ ಅವರು ಹೇಳಿಕೊಂಡಿದ್ದಾರೆ.

ಹೋದಲೂರ ಕ್ರಾಸ್‍ನಿಂದ ಜಮಗಾ ರಸ್ತೆಗೆ ನಿರ್ವಹಣೆ, ದೇಗಾಂವ,ಬಿಲಗುಂದ ಕಾಮಗಾರಿ ದುರುಸ್ಥಿ, ಜಿರೋಳಿ ಗ್ರಾಮ ಸಂಪರ್ಕ ಬ್ರೀಜ್‍ಕಂ ಬ್ಯಾರೇಜ್, ಜಮಗಾ ಕೆ. ಖಂಡಾಳ ಸೀಮೆ ಮತ್ತೊಂದಡೆ ಬೋಧನಿಂದ ಬಿಲಗುಂದ ವರೆಗಿನ ರಸ್ತೆ ಮಳೆಯ ನೀರಿಗೆ ಅವ್ಯವಸ್ಥೆಗೊಂಡಿದೆ. ಕಾಮಗಾರಿ ಕೈಗೊಳ್ಳಲಾಗುವುದು ಎಂದು ಬಿರಾದಾರ ತಿಳಿಸಿದ್ದಾರೆ.