ಆನವಟ್ಟಿಯ ನಾಡ ಕಚೇರಿ ಮುಂದೆ ಟೋಕನ್‍ ಪಡೆಯಲು ಬೆಳ್ಳಂಬೆಳ್ಳಗೆ ಜನ ಕಾದು ನಿಲ್ಲಬೇಕಾದ ಅನಿವಾರ್ಯತೆಯಿದ್ದು, ಈ ಅವ್ಯವಸ್ಥೆಯನ್ನು ಖಂಡಿಸಿ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಬೆಳ್ಳಂಬೆಳ್ಳಗೆ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯ ಬಿಟ್ಟು ಆಧಾರ್ ಕಾರ್ಡ್ ಮಾಡಿಸುವುದಕ್ಕಾಗಿ, ಬೆಳ್ಳಗೆ ಐದು ಗಂಟೆಗೆ ಬಂದು ಕಾಯುವ ಪರಿಸ್ಥಿತಿ. ದಿನವೀಡಿ ಕಾದರೂ ಆಧಾರ್ ಇವತ್ತೇ ಆಗುತ್ತೆ ಅನ್ನುವ ಗ್ಯಾರಂಟಿ ಇಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ಆನವಟ್ಟಿ ಸೇರಿದಂತೆ ಸುತ್ತಲ ಹಳ್ಳಿಯ ಜನರದ್ದಾಗಿದೆ.

ಹೊಸ ಆಧಾರ್ ಮಾಡಿಸುವವರು, ತಿದ್ದುಪಡಿ ಮಾಡಿಸುವವರು ವಿವಿಧ ಹಳ್ಳಿಗಳಿಂದ ಬೆಳ್ಳಗೆ ಐದು ಗಂಟೆಗೆ ಟೋಕನ್‍ ಪಡೆಯುವುದಕ್ಕೆ ಜನರ ದಂಡು ನಾಡ ಕಚೇರಿ ಮುಂದೆ ಹಾಜರಾಗುತ್ತಿದ್ದು, ಟೋಕನ್‍ ಪಡೆದ ನಂತರ ಆಧಾರ್ ಮಾಡಿಸಲು ಮರುದಿನ ಬರಬೇಕು. ಮೂರು ದಿನದಿಂದ ತಾಂತ್ರಿಕ ತೊಂದರೆ, ಆಧಾರ್ ಕಾರ್ಯ ಸ‍್ಥಗಿತವಾಗಿದ್ದು, ಕಚೇರಿ ಮುಂದೆ ಅಂಟಿಸಿರುವ ನೋಟಿಸ್‍ ನೋಡಿ ಬೇಸರದಿಂದ ವಾಪಸಾಗುತ್ತಿರುವ ಜನ ವ್ಯವಸ್ಥೆ ಖಂಡಿಸಿ ಹಿಡಿಶಾಪ ಹಾಕುತ್ತಿದ್ದಾರೆ.

ನಾವು ರೈತರು ಬೆಳ್ಳಗ್ಗೆ ಹೋಲದಲ್ಲಿ ಕೆಲಸವಿರುತ್ತದೆ. ಆಧಾರ್ ಕಾರ್ಡ್ ಮಾಡುವವರು 10 ಗಂಟೆಗೆ ಬರುತ್ತಾರೆ. ಹಳ್ಳಿಗಳಿಂದ ಬಹಳ ಜನ ಬರುವುದರಿಂದ ಟೋಕನ್‍ ಸಿಗುವುದಿಲ್ಲ. ಹಾಗಾಗಿ ಬೆಳ್ಳಗೆ ಐದು ಗಂಟೆ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತೇವೆ. ನಮ್ಮ ಕೆಲಸಕಾರ್ಯ ಹಾಳಾದಂತೆ ಸಂಜೆ ನಾಲ್ಕು ಗಂಟೆಯ ನಂತರ ಟೋಕನ್‍ ನೀಡುವಂತೆ ಆಗಬೇಕು. ಮರುದಿನ 10 ಗಂಟೆಗೆ ಬಂದು ಆಧಾರ್ ಮಾಡಿಸಿಕೊಳ್ಳುತ್ತೇವೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಕೃಷಿಕ ಲೋಕಪ್ಪ ಹುಣಸವಳ್ಳಿ ಒತ್ತಾಯಿಸಿದರು. ಇನ್ನು ಆಧಾರ್‌ ಕೇಂದ್ರದ ಆಪರೇಟರ್ ಮಂಜುನಾಥ ಮಾತನಾಡಿ, ಸರತಿ ಸಾಲಿನಲ್ಲಿ ಬಂದವರಿಗೆ ಆಧಾರ್ ಮಾಡಿಕೊಡುತ್ತಿದ್ದೇವೆ. ದಿನಕ್ಕೆ 20 ಆಧಾರ್ ಮಾಡಲು ಸಾಧ್ಯ. ಅದರಲ್ಲೂ ಕರೆಂಟ್‍ ಹೋದರೆ ಇನ್ನೂ ಉಳಿದು ಕೊಂಡು ಬಿಡುತ್ತವೆ. ಸರ್ವರ್‌ ತಾಂತ್ರಿಕ ದೋಷದಿಂದ ಆಧಾರ್ ಮಾಡಲು ಆಗುತ್ತಿಲ್ಲ. ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ, ಸರಿಯಾದ ಕೂಡಲೇ ಸೇವೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.