ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ನಮ್ಮ ಸಂವಿಧಾನ ಬದ್ಧವಾದ ಹಕ್ಕುಗಳನ್ನು ನಾವು ಪಡೆಯಲು ಯಾವುದೇ ಅಡೆತಡೆಗಳಿಲ್ಲ. ಪಾಲಕ-ಪೋಷಕರು ಎಲ್ಲಾ ಇಲಾಖೆಗಳ ಮತ್ತು ಸಂಘ-ಸಂಸ್ಥೆಗಳು ಹಾಗೂ ಸಮುದಾಯದಲ್ಲಿರುವ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯಾದಗಿರಿ, ಜಿಲ್ಲಾ ಮಕ್ಕಳ ರಕ್ಷಣ ಘಟಕ, ಪೊಲೀಸ್ ಇಲಾಖೆ, ಹಾಗೂ ಮಕ್ಕಳ ಸಹಾಯವಾಣಿ-1098 ಯಾದಗಿರಿ ಅವರ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ನಗರದ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಜನ ಜಾಗೃತಿ ಜಾಥಾ ಹಾಗೂ ನಗರದ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯು ಬಹುಮುಖ್ಯವಾಗಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಹಾಗೂ ಶಿಕ್ಷಣದ ಪ್ರಸಾರದ ಮೂಲವಾದ ಗುರಿಯನ್ನು ಹೊಂದಿದ್ದು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.ಸಹಾಯಕ ಆಯುಕ್ತ ಪ್ರಕಾಶ ಕುದರಿ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯು ಗ್ರಾಮಾಂತರ ಭಾಗದಲ್ಲಿ ರೂಢಿಯಲ್ಲಿದ್ದು, ಬಡತನ ಹಾಗೂ ಶಿಕ್ಷಣದ ಕೊರತೆಯಿಂದ ಹಳ್ಳಿಗಳು ಮುಕ್ತವಾದಾಗ ಮಾತ್ರ ನಮ್ಮ ಜಿಲ್ಲೆಯು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯ. ಅಲ್ಲದೆ ಪಾಲಕರಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಮನೋಬಾವ ಬೆಳೆದಾಗ ಮಾತ್ರ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿಗಳಾದ ಗುರುಪ್ರಸಾದ ವೈದ್ಯ ಮಾತನಾಡಿ, 2ನೇ ಮಹಾಯುದ್ಧವು ವಿಶ್ವದಾದ್ಯಂತ ಬಾಲಕಾರ್ಮಿಕ ಪದ್ಧತಿ ಎಂಬ ಭೀಕರ ಪರಿಣಾಮ ಹರಡಿತು. ವಿಶ್ವಸಂಸ್ಥೆ ಹಾಗೂ ವಿಶ್ವ ನಾಯಕರು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏಕರೂಪ ನೀತಿಗಳನ್ನು ಜಾಗತಿಕ ಮಟ್ಟದಲ್ಲಿ ರೂಪಿಸಿ, ಕಾರ್ಯರೂಪಕ್ಕೆ ತಂದಾಗ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಸಾಧ್ಯ ಎಂದರು.ಶಿಶು ಯೋಜನಾಭಿವೃದ್ಧಿ ಅಧಿಕಾರಿ ಲಾಲ್‌ಸಾಬ್ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಯು ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ ಇದಕ್ಕೆ ವಿದ್ಯಾರ್ಥಿಗಳು, ಪಾಲಕರು-ಪೋಷಕರು ಕೈ ಜೋಡಿಸಬೇಕು ಎಂದ ಅವರು, ಮಕ್ಕಳ ಯಾವುದೇ ಸಮಸ್ಯೆ ಇದ್ದಲ್ಲಿ 1098 ಅಥವಾ 112 ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ ವರ್ಕನಳ್ಳಿ ಮಾತನಾಡಿದರು.ಜೆ.ಎಂ.ಎಫ್.ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರಾಹುಲ್ ಚಾಂಬರ್ ಅವರು, ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿರುವ ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಜನಜಾಗೃತಿ ಜಾಥಾ ನಗರದ ಮುಖ್ಯ ರಸ್ತೆಗಳಲ್ಲಿ ಇರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಜಾಗೃತಿಯನ್ನು ಮೂಡಿಸಲಾಯಿತು.ನಗರದ ಬಸ್‌ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಕುರಿತು ಸ್ಟಾಲ್‌ಗಳನ್ನು ಹಾಕಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ ಸಂಘ-ಸಂಸ್ಥೆಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.ಸಿವಿಲ್ ನ್ಯಾಯಾಧೀಶರಾದ ಅರುಣ್ ಚೌಗುಲೆ, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ರೇಖಾ ಮ್ಯಾಗೇರಿ, ಡಿಡಿಪಿಐ ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ, ಯಾದಗಿರಿ ಟಿಎಚ್ಒ ಡಾ. ಹಣಮಂತರೆಡ್ಡಿ, ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಸಬೇರಾ ಬೇಗಂ, ಸುರಪುರ ಕಾರ್ಮಿಕ ನಿರೀಕ್ಷಕ ಗಂಗಾಧರ, ಡಾನ್ ಬೋಸ್ಕೋ ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾದರ್ ಫ್ರಾನ್ಸಿಸ್ ಶಾಬು, ವರ್ಲ್ಡ ವಿಷನ್ ಸಂಸ್ಥೆಯ ನಿರ್ದೇಶಕ ಅನಿಲ ತೇಜಪ್ಪ, ಸಾಧು ಸುಂದರ ಸಿಂಗ್ ಸಂಸ್ಥೆಯ ರವಿ ಯಡ್ಡಳ್ಳಿ ಸೇರಿದಂತೆ ಇತರರಿದ್ದರು.