ದಾವಣಗೆರೆ ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಬಳಿ ಯಾವುದೋ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಘರ್ಷಣೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದವರ ಬಂಧನಕ್ಕೆ ತೆರಳಿದ್ದ ಮಹಿಳಾ ಸಿಪಿಐ ಮೊಬೈಲ್ ಕಸಿದುಕೊಂಡು, ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಬಳಿ ಯಾವುದೋ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಘರ್ಷಣೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದವರ ಬಂಧನಕ್ಕೆ ತೆರಳಿದ್ದ ಮಹಿಳಾ ಸಿಪಿಐ ಮೊಬೈಲ್ ಕಸಿದುಕೊಂಡು, ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕಾಂಗ್ರೆಸ್‌-ಜೆಡಿಎಸ್ ಪಕ್ಷಗಳ ಒಂದೇ ಕೋಮಿನ ಇಬ್ಬರು ಮುಖಂಡರ ಮಕ್ಕಳ ಮಧ್ಯೆ ಜಗಳವು ವಿಕೋಪಕ್ಕೆ ತಲುಪಿ, ಪರಸ್ಪರರು ಹೊಡೆದಾಡಿಕೊಂ

ಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ಲಾಠಿಗಳಿಗೆ ಲಘು ಕೆಲಸ ಕೊಟ್ಟು, ಗುಂಪನ್ನು ಚದುರಿಸಿದರು. ಘರ್ಷಣೆಗೆ ಸಂಬಂಧಿಸಿದಂತೆ ಇಮಾಂ ನಗರದಲ್ಲಿ ರೌಡಿಶೀಟರ್ ಹುಸೇನ್ ಎಂಬಾತನ ಬಂಧನಕ್ಕೆ ತೆರಳಿದ್ದ ಬಡಾವಣೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕಿ ಗಾಯತ್ರಿ ಮೊಬೈಲ್ ಕಸಿದುಕೊಂಡು, ಮಹಿಳಾ ಅಧಿಕಾರಿ ಹಾಗೂ ಕಾನ್ಸಟೇಬಲ್‌ಗಳಾದ ಕೆಂಚಪ್ಪ, ಹರೀಶ ಮೇಲೂ ಹಲ್ಲೆ ಮಾಡಿದ್ದಾನೆಂದು ಹೇಳಲಾಗಿದೆ. ರೌಡಿಶೀಟರ್ ಹುಸೈನ್‌ ಕಾಂಗ್ರೆಸ್ ಪಕ್ಷದ ದಕ್ಷಿಣ ಕ್ಷೇತ್ರದ ಅಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಗ ಎನ್ನಲಾಗಿದೆ. ಇನ್ನೊಂದು ಗುಂಪು ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ಮಗ ಮತ್ತು ಗುಂಪು ಎಂದು ಹೇಳಲಾಗಿದೆ.

ಸಿಪಿಐ ಗಾಯತ್ರಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಹುಸೇನ್‌ ಮೊಬೈಲ್ ಕಸಿದುಕೊಂಡು, ಹಲ್ಲೆ ಮಾಡಿದ ವಿಚಾರ ತಿಳಿಯುತ್ತಿದ್ದಂತೆಯೇ ಡಿವೈಎಸ್ಪಿ ಬಿ.ಶರಣ ಬಸವೇಶ್ವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಮೊಕ್ಕಾಂ ಮಾಡಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಗಲಾಟೆ ಮಾಡಿದವರ ಬಂಧನಕ್ಕೆ ತೆರಳಿದ್ದ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆಯೇ ಆರೋಪಿಗಳು ಹಲ್ಲೆ ಮಾಡಿದ್ದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಜಿಲ್ಲಾಸ್ಪತ್ರೆ ಆವರಣದ ತುರ್ತು ಚಿಕಿತ್ಸಾ ವಿಭಾಗದ ಸನಿಹ ಸಿನಿಮೀಯ ರೀತಿ ಎರಡೂ ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಒಂದೇ ಕೋಮಿನ ಎರಡು ಗುಂಪುಗಳ ಹೊಡೆದಾಟ ನಿಯಂತ್ರಿಸಲು ಬೆರಳೆಣಿಕೆಯಷ್ಟಿದ್ದ ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರ ಸಮ್ಮುಖದಲ್ಲೇ ಹೊಡೆದಾಡುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಅಧಿಕಾರಿ, ಸಮವಸ್ತ್ರದಾರಿ ಮತ್ತು ಮಫ್ತಿಯಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಲಾಠಿ ಬೀಸಿದ್ದರಿಂದ ಗುಂಪು ಚದುರಿದವು.

ಎರಡೂ ಗುಂಪಿನ ಮಧ್ಯೆ ನಡೆದ ಘರ್ಷಣೆಗೆ ಏನು ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಹಳೆ ದಾವಣಗೆರೆ ಭಾಗದ ಅಕ್ತರ್ ರಜಾ ವೃತ್ತದಲ್ಲಿ ಎರಡೂ ಗುಂಪುಗಳ ಮಧ್ಯೆ ಮಧ್ಯಾಹ್ನ ಗಲಾಟೆ

ಆಗಿತ್ತು. ನಂತರ ರಾಜಿ ಪಂಚಾಯಿತಿ ವಿಚಾರಕ್ಕೆಂದು ಎರಡೂ ಕಡೆಯವರು ಸೇರಿದ್ದರು. ರಾಜಿ ಸಂಧಾನದ ವೇಳೆ ಮತ್ತೆ ಉಭಯ ಕಡೆಯವರ ಮಧ್ಯೆ ಮಾತಿಗೆ ಮಾತು ಬೆಳೆದು, ವಿಕೋಪಕ್ಕೆ ತಲುಪಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಎಂಎಲ್‌ಸಿ ಮಾಡಿಸಲು ಕರೆ ತಂದಾಗ ಮತ್ತೆ ಎರಡೂ ಗುಂಪುಗಳು ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡವು.

ಪರಿಸ್ಥಿತಿ ಕೈಮೀರುವುದನ್ನು ಗ್ರಹಿಸಿದ ಪೊಲೀಸರು ಮೇಲಧಿಕಾರಿಗಳಿಗೆ ತಕ್ಷಣವೇ ವಿಷಯ ತಿಳಿಸಿ, ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲೂ ವ್ಯಾಪಕ ಮುಂಜಾಗ್ರತೆ ವಹಿಸಲಾಗಿದೆ. ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.