ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2005ರಲ್ಲಿ ಜಾರಿಗೆ ಬಂದಿದ್ದು, ಅಂದಿನ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕನಸಿನ ಯೋಜನೆಯಾಗಿದ್ದು, ಗ್ರಾಮೀಣ ಬಡ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಒದಗಿಸುವ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಶೇ.90 ರಾಜ್ಯ ಸರ್ಕಾರ ಶೇ.10ರ ಅನುದಾನದೊಂದಿಗೆ ಅನುಷ್ಟಾನಗೊಂಡಿತ್ತು ಎಂದು ತಿಳಿಸಿದರು.
ಈ ಯೋಜನೆಯಡಿ ರಸ್ತೆ, ನೆಡುತೋಪು, ನೀರಾವರಿ ಕಾಮಗಾರಿ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಜೋವನೋಪಾಯ ಹೆಚ್ಚಿಸಲು ಅನುಕೂಲವಾಗಿತ್ತು. ಆದರೆ, ಈಗ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ಮೇಲೆ ಅದನ್ನು ವಿಬಿಜಿ ಗ್ರಾಮ್ ಜಿ ಎಂದು ನಾಮಕರಣ ಮಾಡುವುದರ ಮೂಲಕ ಗಾಂಧಿ ಹೆಸರು ಕೈಬಿಟ್ಟಿದೆ. ಅದು ಕೇಂದ್ರ ಸರ್ಕಾರದ ಅಣತಿಯಂತೆ ಕೇಂದ್ರ ಆರಿಸಿದ ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ದೂರಿದರು.ಅಧಿಕಾರ ವಿಕೇಂದ್ರೀಕರಣ ಹಾಗೂ ಒಕ್ಕೂಟ ವ್ಯವಸ್ಥೆಯ ಮೇಲೆ ಸರ್ಜಿಕಲ್ ಸ್ಟ್ರೈಕ್ ಎಂಬಂತೆ ಕ್ರಿಯಾಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಮಾಸ್ಟರ್‌ಪ್ಲ್ಯಾನ್ ಅನ್ವಯವೇ ಗ್ರಾಮ ಪಂಚಾಯ್ತಿಗಳು ರೂಪಿಸಬೇಕು. ಪೂರ್ವ ನಿರ್ಧಾರಿತ 60 ದಿನ ಇಡೀ ಯೋಜನೆಗೆ ನಿರ್ಬಂಧವಿದ್ದು, ಇದು ಕಾರ್ಮಿಕರ ಬೇಡಿಕೆಗೆ ಉದ್ಯೋಗ ಕತ್ತರಿ ವ್ಯವಸ್ಥೆಯಾಗಿದೆ. ಈ ಯೋಜನೆಯಲ್ಲಿ ಗುತ್ತಿಗೆದಾರರು ಪರೋಕ್ಷವಾಗಿ ಒಳಬರುವ ಅವಕಾಶವಿದ್ದು, ಹಿಂಬಾಗಿಲಿನ ಪ್ರವೇಶ ಸಾಧ್ಯತೆ ಸೃಷ್ಟಿಸಲಾಗಿದೆ. ಜಟಿಲವಾದ ತಾಂತ್ರಿಕ ವ್ಯವಸ್ಥೆಗಳ ಹೇರಿಕೆಯಿಂದ ಉದ್ಯೋಗಾವಕಾಶ ವಂಚಿಸುವ ಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.
ಪಂಚಾಯಿತಿಗಳಿಗೆ ನಿಯಮಾತ್ಮಕ ಹಂಚಿಕೆ ಅನ್ವಯ ಅನುದಾನ ಹಂಚಿಕೆ ಕೇಂದ್ರ ಮಾಡಲಿದ್ದು, ಹೆಚ್ಚುವರಿ ಖರ್ಚು ಬಂದರೆ ಕೇಂದ್ರ ಹಣ ನೀಡುವುದಿಲ್ಲ. ಗ್ರಾಪಂಗಳ ಯಾವುದೇ ಕೆಲಸದ ಯೋಜನೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾಸ್ಟರ್‌ಪ್ಲಾನ್ ಒಳಗೆ ಇರಬೇಕಾಗಿದ್ದು, ಗ್ರಾಪಂ ಸಭೆ ಹಾಗೂ ಪಂಚಾಯಿತಿಗಳಿಗೆ ಅವಶ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ಮೊಟಕುಗೊಳಿಸಿದೆ ಎಂದು ದೂರಿದರು.ವೇತನ ದರಗಳನ್ನು ಕನಿಷ್ಠವೇತನ ಅಥವಾ ಬೆಲೆ ಏರಿಕೆಗೆ ಅವಕಾಶವಿಲ್ಲದಂತೆ ನಿಗದಿಪಡಿಸಿದೆ. ನೂತನ ಮಂಡಳಿ ಮತ್ತು ಸ್ಟೀರಿಂಗ್ ಸಮಿತಿಗಳಿಗೆ ಅಸ್ಪಷ್ಟ ಅಧಿಕಾರ ನೀಡಲಾಗಿದ್ದು, ಎಸ್‌ಟಿ, ಓಬಿಸಿ, ಎಸ್ಸಿ ಸಮುದಾಯಗಳ ಕಡ್ಡಾಯ ಪ್ರಾತಿನಿದ್ಯತೆ ಅಧಿಕಾರ ರದ್ದುಗೊಳಿಸಲಾಗಿದ್ದು, ಕೇಂದ್ರ ಸರ್ಕಾರ ನಿಗಧಿಪಡಿಸುವ ಅನುದಾನದಲ್ಲಿ 40 ರಷ್ಟು ಹಣವನ್ನು ರಾಜ್ಯವೇ ಭರಿಸಬೇಕಾಗಿದ್ದು, ಯೋಜನೆ ಜಾರಿಯಲ್ಲಿ ಅಧಿಕಾರ ಇಲ್ಲದಿದ್ದರೂ ರಾಜ್ಯಗಳ ಹಾಗೂ ಪಂಚಾಯಿತಿ ಮೇಲೆ ಕೇಂದ್ರದಿಂದ ಆರ್ಥಿಕ ಹೊರೆ ಹೇರಿಕೆಯಾಗಿದೆ ಎಂದು ಆಪಾದಿಸಿದರು.
ವಿಬಿಜಿ ರಾಮ್-ಜಿ ಕಾಯ್ದೆಯಿಂದ ದುಷ್ಪರಿಣಾಮ ಉಂಟಾಗಿದ್ದು, ಈ ಯೋಜನೆ ರದ್ದುಮಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನೇ ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್, ಕಾಂಗ್ರೆಸ್ ಪ್ರಮುಖರಾದ ಇಸ್ಮಾಯಿಲ್ ಖಾನ್, ಎನ್.ರಮೇಶ್, ಕಲಗೋಡು ರತ್ನಾಕರ್, ಹೆಚ್.ಸಿ. ಯೋಗೀಶ್, ಖಲೀಂಪಾಷಾ, ಶಿವಕುಮಾರ್, ರವಿಕುಮಾರ್, ಜಿ.ಡಿ. ಮಂಜುನಾಥ್, ಶ್ವೇತಾಬಂಡಿ, ಸ್ಟೇಲ್ಲಾ ಮಾರ್ಟಿನ್, ಎಸ್.ಟಿ. ಚಂದ್ರಶೇಖರ್, ಶಿ.ಜು.ಪಾಶ, ಜಿ.ಪದ್ಮನಾಭ, ಧೀರರಾಜ್ ಹೊನ್ನವಿಲೆ, ವಿಜಯಲಕ್ಷ್ಮೀ ಸಿ. ಪಾಟೀಲ್, ವಿಶ್ವಾನಾಥ್ ಕಾಶೀ, ಭಾರತೀ ರಾಮಕೃಷ್ಣ, ಸುವರ್ಣಾ ನಾಗರಾಜ್, ಅರ್ಚನಾ ಸೇರಿದಂತೆ ಹಲವರಿದ್ದರು.