ಸಾರಾಂಶ
ಸುರೇಶ ಭೀ.ಬಾಳೋಜಿ
ಕನ್ನಡಪ್ರಭ ವಾರ್ತೆ ಸವದತ್ತಿಏಳು ಕೊಳ್ಳದ ಸಂಗಮದಲ್ಲಿರುವ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಬುಧವಾರದಂದು ಭಾರತ ಹುಣ್ಣಿಮೆಯ ಸಂಭ್ರಮ ಎಲ್ಲೆಡೆ ಮೊಳಗಿತ್ತು. ವರ್ಷದಲ್ಲಿ ವಿಶೇಷವಾಗಿರುವ ಈ ತರಳಬಾಳು ಹುಣ್ಣಿಮೆಯ ದಿನದಂದು ಲಕ್ಷ, ಲಕ್ಷ ಭಕ್ತರು ಶ್ರೀಕ್ಷೇತ್ರದಲ್ಲಿ ಸೇರಿ ಶ್ರೀದೇವಿಯ ದರ್ಶನ ಭಾಗ್ಯ ಪಡೆದರು.
ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಶ್ರೀದೇವಿ ದರ್ಶನಪಡೆದು ಕೃತಾರ್ಥರಾದರು. ಭಕ್ತಿಯ ಪರಾಕಾಷ್ಠೆಯ ಮಡಿಲಲ್ಲಿ ಉಧೋ! ಉಧೋ! ಉದ್ಘಾರ ಮೊಳಗಿ, ಶ್ರೀ ಕ್ಷೇತ್ರದಲ್ಲಿ ಭಕ್ತರು ಶ್ರೀದೇವಿಗೆ ಭಕ್ತಿ ಸಮರ್ಪಣೆ ಮಾಡಿದರು. ಭಕ್ತರು ದೇವಿಯ ದರ್ಶನ ಭಾಗ್ಯ ಪಡೆದು ಶ್ರೀದೇವಿಗೆ ಕಾಯಿ ಕರ್ಪೂರ ಸಮರ್ಪಿಸಿ ದೇವಿಯ ದರ್ಶನದಿಂದ ಕೃತಾರ್ಥರಾದರು.ಪಡ್ಡಲಗಿ ಸಮರ್ಪಣೆ:
ಕಳೆದ ಮರ‍್ನಾಲ್ಕು ದಿನಗಳಿಂದ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಚಕ್ಕಡಿ ಹಾಗೂ ಮೋಟಾರು ವಾಹಗಳಲ್ಲಿ ಆಗಮಿಸಿದ ಭಕ್ತರು ದೇವಸ್ಥಾನದ ಆವರಣದಲ್ಲಿ ಬಿಡಾರ ಹೂಡಿ ತಾವು ಊರಿಂದ ತಂದಂತ ಪದಾರ್ಥಗಳಿಂದ ಅಡುಗೆ ಮಾಡಿ ಶ್ರೀದೇವಿಗೆ ನೈವೇದ್ಯ ಅರ್ಪಿಸಿದರು. ದೇವಸ್ಥಾನದ ಗುಡ್ಡದ ವಿಶಾಲ ಪ್ರದೇಶದಲ್ಲಿ ಒಲೆ ಹೂಡಿ ಕಡಬು, ಹೋಳಿಗೆ, ಕಿಚಡಿ, ಅನ್ನ ಮಾಡಿ ಪಡ್ಡಲಗಿಯನ್ನು ತುಂಬಿ ದೇವಿಯ ಕೃಪೆಗೆ ಪಾತ್ರರಾದರು.ಶ್ರೀಕ್ಷೇತ್ರದ ಪ್ರಮುಖ ಆಕರ್ಷಣೆ ಹಾಗೂ ಪ್ರಸಾದ ಕುಂಕುಮ ಬಂಡಾರವಾಗಿದ್ದು, ಕುಂಕುಮ ಬಂಡಾರದ ಜೊತೆಗೆ ಭಕ್ತರು ಹಸಿರು ಬಳೆಗಳನ್ನು ಹಾಗೂ ಬಾಳೆ ಹಣ್ಣು, ಕಾಯಿ, ಕರ್ಪೂರ ಹಾಗೂ ಬೆಂಡು-ಬೆತ್ತಾಸು ಮತ್ತು ಮಿಠಾಯಿಗಳನ್ನು ಖರೀದಿಸಿ ಸಂಭ್ರಮಪಟ್ಟರು.ಪ್ರಾಧಿಕಾರ ರಚನೆ:
ಇತ್ತೀಚೆಗೆ ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಪ್ರಾಧಿಕಾರ ರಚನೆಯಾದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸ್ವಚ್ಚತೆ ಹಾಗೂ ಅಭಿವೃದ್ಧಿ ದೃಷ್ಟಿಕೋನದಲ್ಲಿ ಕ್ಷೇತ್ರದ ಆವರಣದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೂಡಂಗಡಿ ಮತ್ತು ರಸ್ತೆ ಅಕ್ಕಪಕ್ಕದ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿರುವುದರಿಂದ ವ್ಯಾಪಾರಸ್ಥರಲ್ಲಿ ಕೆಲವು ಗೊಂದಲಗಳಾಗುತ್ತಿರುವುದು ಕಂಡು ಬರುತ್ತಿದೆ. ಕ್ಷೇತ್ರದ ಪರಂಪರೆಗೆ ಧಕ್ಕೆಯಾಗದಂತೆ ದೇವಸ್ಥಾನ ಸೇರಿದಂತೆ ಕ್ಷೇತ್ರವೆಲ್ಲ ಸಂಪೂರ್ಣ ಅಭಿವೃದ್ಧಿಯಾಗಿ ಇದೊಂದು ಮಾದರಿ ತೀರ್ಥ ಕ್ಷೇತ್ರವಾಗಲಿ ಎಂಬುವುದು ಭಕ್ತರ ಆಶಯವಾಗಿದೆ. ಭಾರತ ಹುಣ್ಣಿಮೆಯ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ತೀವ್ರಗತಿಯಲ್ಲಿ ಪ್ರಾರಂಭಗೊಳ್ಳಲಿವೆ ಎಂಬ ಮಾಹಿತಿ ಆಡಳಿತ ವರ್ಗದಿಂದ ಕೇಳಿ ಬರುತ್ತಿದೆ. ಪುರಾತನ ಪುಣ್ಯ ಕ್ಷೇತ್ರವಾಗಿರುವ ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನ ಉತ್ತರ ಕರ್ನಾಟಕದ ಹಿರಿಮೆಯಾಗಿದ್ದು, ಕ್ಷೇತ್ರದಲ್ಲಿ ಉನ್ನತ ಅಭಿವೃದ್ಧಿಯಾಗುವುದರ ಜತೆಗೆ ಸ್ವಚ್ಛತೆಯ ಕಡೆಗೆ ವಿಶೇಷ ಗಮನ ಹರಿಸಬೇಕೆಂಬುವುದು ಸಾರ್ವಜನಿಕವಲಯದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ.
ಅಭಿವೃದ್ಧಿ ಕಡೆಗೆ ಚಿಂತನೆ:
ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಪ್ರವಾಸೋದ್ಯಮ ಪ್ರಾಧಿಕಾರದ ಜತೆಗೆ ದೇವಸ್ಥಾನಕ್ಕೆ ವಿಶೇಷವಾದ ಪ್ರಾಧಿಕಾರ ರಚನೆಗೊಂಡಿದ್ದು, ಕೇಂದ್ರ ಸರ್ಕಾರದಿಂದ ₹೧೦೦ ಕೋಟಿಗಳ ಅನುದಾನವು ಸಹ ಬಂದಿದೆ. ವರ್ಷವಿಡಿ ಕೋಟ್ಯಂತರ ಭಕ್ತರು ಆಗಮಿಸುವ ಈ ಪುಣ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಗಳಾಗಬೇಕಿದ್ದು, ಪ್ರತಿಯೊಬ್ಬರ ಸಹಕಾರವು ಬಹುಮುಖ್ಯವಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣ ಹಾಗೂ ವ್ಯಕ್ತಿ ಪ್ರತಿಷ್ಠೆಯನ್ನು ಬಿಟ್ಟು ಭಕ್ತರ ಬೇಡಿಕೆಯಂತೆ ಉತ್ತಮವಾದಂತ ರಸ್ತೆಗಳು, ಕುಡಿಯುವ ನೀರು, ವಸತಿ ಹಾಗೂ ಸ್ವಚ್ಛತೆಯ ಕಡೆಗೆ ವಿಶೇಷ ಗಮನ ಹರಿಸಬೇಕಿದೆ. ಹಲವಾರು ವರ್ಷಗಳಿಂದ ತಿರುಪತಿ ಮಾದರಿಯಲ್ಲಿ ಯಲ್ಲಮ್ಮನಗುಡ್ಡವನ್ನು ಅಭಿವೃದ್ಧಿ ಮಾಡುತ್ತೇವೆ ಎಂಬ ಮಾತು ಮಾತ್ರ ಕೇಳಿ ಬರುತ್ತಿದ್ದು, ಅದು ಕಾರ್ಯ ರೂಪಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆ ನಿರಂತರವಾಗಿ ಕೊರೆಯುತ್ತಿದೆ. ಕ್ಷೇತ್ರದಲ್ಲಿ ಕೈಗೊಂಡಂತ ಅಭಿವೃದ್ಧಿ ಕಾಮಗಾರಿಗಳ್ನು ಲೋಕಾರ್ಪಣೆಗೊಳಿಸುವುದರ ಜೊತೆಗೆ ಅವುಗಳು ಸದ್ಬಳಕೆಯಾಗುವಂತೆ ಸೂಕ್ತಕ್ರಮ ಕೈಗೊಳ್ಳಬೇಕಿದೆ.ರಸ್ತೆ ಅಗಲೀಕರಣ ಅವಶ್ಯ:ಸಾಕಷ್ಟು ವಾಹನಗಳ ದಟ್ಟನೆಯಾಗುತ್ತಿರುವ ಈ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವುದು ಅತ್ಯವಶ್ಯವಾಗಿದೆ. ಮುಖ್ಯವಾಗಿ ಮೂರು ದಿಕ್ಕಿನಲ್ಲಿ ರಸ್ತೆಗಳನ್ನು ಅಗಲೀಕರಣ ಮಾಡಿದಲ್ಲಿ ದಟ್ಟನೆ ನಿಯಂತ್ರಗೊಳಿಸಲು ಸಾಧ್ಯತೆಗಳಿವೆ. ಸವದತ್ತಿ ಪಟ್ಟಣದ ಎಪಿಎಂಸಿಯಿಂದ ಯಲ್ಲಮ್ಮನಗುಡ್ಡದವರೆಗೆ ಮತ್ತು ಜೋಗುಲ ಭಾವಿ ಸತ್ಯೆಮ್ಮಾ ದೇವಸ್ಥಾನದಿಂದ ದಬದಬೆ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸೇರುವ ರಸ್ತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಗಲೀಕರಣಗೊಳಿಸಬೇಕಿದೆ. ಉಗರಗೋಳದಿಂದ ಕ್ಷೇತ್ರಕ್ಕೆ ಸೇರುವ ರಸ್ತೆಯು ಸಹ ಇಕ್ಕಟ್ಟಾಗಿರುವುದರಿಂದ ಇದನ್ನು ಡಬಲ್ ರೋಡ್ ಮಾಡಿದಲ್ಲಿ ವಾಹನಗಳ ದಟ್ಟನೆ ನಿಯಂತ್ರಣಕ್ಕೆ ಬರಲು ಸಾಧ್ಯವಾಗಲಿದೆ. ಕ್ಷೇತ್ರದಲ್ಲಿ ಒಟ್ಟಾರೆ ಸುಗಮ ಸಾರಿಗೆ ಸಂಚಾರ ಮತ್ತು ಸ್ವಚ್ಛತೆಗೆ ಪರಿಪೂರ್ಣ ಹಾಗೂ ಶಾಸ್ವತ ವ್ಯವಸ್ಥೆಯನ್ನು ಪ್ರಾಧಿಕಾರವು ವಿಶೇಷ ಕಾಳಜಿವಹಿಸಬೇಕೆಂಬುವುದು ಭಕ್ತರ ಅಭಿಪ್ರಾಯ.