ಪ್ರವಾದಿ ಅವಹೇಳನಕ್ಕೆ ಖಂಡಿಸಿ ಭಟ್ಕಳ ಬಂದ್‌ಗೆ ಉತ್ತಮ ಸ್ಪಂದನೆ

| Published : Oct 16 2024, 12:43 AM IST

ಪ್ರವಾದಿ ಅವಹೇಳನಕ್ಕೆ ಖಂಡಿಸಿ ಭಟ್ಕಳ ಬಂದ್‌ಗೆ ಉತ್ತಮ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸ್ವಾಮಿ ನರಸಿಂಹಾನಂದರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಕಠಿಣ ಶಿಕ್ಷೆ ಒದಗಿಸಬೇಕು ಎನ್ನುವುದು ತಂಝೀಂನ ಒತ್ತಾಯವಾಗಿತ್ತು.

ಭಟ್ಕಳ: ಪ್ರವಾದಿ ಮಹಮದ್ ಪೈಗಂಬರರ ಬಗ್ಗೆ ಉತ್ತರ ಪ್ರದೇಶದ ಸ್ವಾಮಿ ನರಸಿಂಹಾನಂದ ಅವರು ಅವಹೇಳನಕಾರಿ ಭಾಷಣ ಮಾಡಿರುವುದನ್ನು ಖಂಡಿಸಿ ಮಂಗಳವಾರ ಇಲ್ಲಿನ ಮುಸ್ಲಿಮರ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ ವ ತಂಝೀಂ ಸಂಸ್ಥೆ ಕರೆ ನೀಡಿದ ಭಟ್ಕಳ ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತು.

ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸ್ವಾಮಿ ನರಸಿಂಹಾನಂದರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಕಠಿಣ ಶಿಕ್ಷೆ ಒದಗಿಸಬೇಕು ಎನ್ನುವುದು ತಂಝೀಂನ ಒತ್ತಾಯವಾಗಿತ್ತು. ಅಲ್ಲದೇ ಸೋಮವಾರ ಭಟ್ಕಳದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಇವರು ಸಂಜೆ ಸಹಾಯಕ ಆಯುಕ್ತರ ಮೂಲಕ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು, ಮುಖ್ಯಮಂತ್ರಿ, ಗೃಹಮಂತ್ರಿಗೆ ಮನವಿ ಸಲ್ಲಿಸಿದ್ದರು.

ಬಂದ್ ಹಿನ್ನೆಲೆ ಮಂಗಳವಾರ ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಮುಸ್ಲಿಮರ ಓಡಾಟ ವಿರಳವಾಗಿತ್ತು. ತಂಝೀಂ ಕರೆಯಿಂದ ಮಂಗಳವಾರ ಮುಸ್ಲಿಮರು ತಮ್ಮ ಅಂಗಡಿ ಮುಂಗಟ್ಟುಗಳನ್ನು, ಶಾಲೆ, ಕಾಲೇಜು, ಖಾಸಗಿ ಕಚೇರಿ ಬಂದ್ ಮಾಡಿದ್ದರು. ಪಟ್ಟಣದಲ್ಲಿ ಮುಸ್ಲಿಮರ ಬಂದ್ ಹಿನ್ನೆಲೆಯಲ್ಲಿ ಕೆಲವು ರಸ್ತೆಗಳು ಜನರ ಓಡಾಟ ಇಲ್ಲದೇ ಬಿಕೋ ಎನ್ನುತ್ತಿದ್ದವು.

ಪ್ರವಾದಿ ಅವರ ಅವಹೇಳನ ಖಂಡಿಸಿ ಮಂಗಳವಾರ ಮುಸ್ಲಿಮರು ಮನೆಯಿಂದ ಹೊರಬೀಳದೇ ಇರುವುದರಿಂದ ವ್ಯಾಪಾರ ವಹಿವಾಟಿನ ಮೇಲೂ ಹೊಡೆತ ಬಿದ್ದಿತ್ತು. ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆ ಮುಂತಾದ ಪ್ರದೇಶದಲ್ಲಿ ಖರೀಧಿಗೆ ಹೆಚ್ಚಿನ ಜನರು ಇರಲಿಲ್ಲ.

ಪಟ್ಟಣದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಮುಸ್ಲಿಮರ ಹೊರತಾಗಿ ಬೇರೆಯವರ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿದ್ದವು. ಮುಸ್ಲಿಮರ ಹೊರತಾಗಿ ಇತರರ ವಾಹನ ಮತ್ತು ಜನರ ಓಡಾಟ ಎಂದಿನಂತೆ ಇತ್ತು.

ಸುದ್ದಿಗಾರರ ಜತೆಗೆ ಮಾತನಾಡಿದ ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರು, ಪ್ರವಾದಿ ಮಹಮದ್ ಪೈಗಂಬರರ ಬಗ್ಗೆ ಮಾಡಿದ ಅವಹೇಳನದಿಂದ ಮುಸ್ಲಿಮರಿಗೆ ತುಂಬಾ ನೋವಾಗಿದೆ. ಪ್ರವಾದಿ ಬಗ್ಗೆ ಯಾವುದೇ ವ್ಯಕ್ತಿ ಅವಹೇಳನಕಾರಿ ಮಾತನಾಡಿದರೂ ಸರ್ಕಾರ ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದರು.