ಮಹಿಮಾಪುರ ಬೆಟ್ಟದಲ್ಲಿ ತಲೆ ಎತ್ತಲಿರುವ ನಕ್ಷತ್ರವನ ಉದ್ಯಾನ

| Published : Oct 16 2024, 12:42 AM IST / Updated: Oct 16 2024, 12:43 AM IST

ಸಾರಾಂಶ

ನಮ್ಮ ಕುಮುದ್ವತಿ ಜಲಾನಯನ ಪ್ರದೇಶವಾದ ಶಿವಗಂಗೆ, ಕೆರೆಕತ್ತಿಗನೂರು, ಹಾದಿಹೊಸಹಳ್ಳಿ, ಹಸಿರುವಳ್ಳಿ, ಮಣ್ಣೆ, ಗ್ರಾಮದಲ್ಲಿ ೮೫ ಸಾವಿರ ಗಿಡಗಳ ಜೊತೆ, ಕೆರೆ ಪುನಶ್ಚೇತನ, ಇಂಗುಗುಡಿ, ಚೆಕ್ ಡ್ಯಾಂ, ಕಾಲುವೆ ತಿರುವು ಯೋಜನೆ ಕೈಗೊಂಡಿದ್ದೇವೆ, ನಮ್ಮ ತಂಡದ ಭೂವಿಜ್ಞಾನಿ ಡಾ.ವೈ.ಲಿಂಗರಾಜು ರವರ ನೀರಿನ ರಕ್ಷಣೆ, ವನಗಳ ಸಂರಕ್ಷಣೆ, ಮಣ್ಣಿನ ಹದಗೊಳಿಸುವಿಕೆ ಮಾರ್ಗದರ್ಶನದಿಂದ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಪುರಾಣಪ್ರಸಿದ್ಧ ಮಹಿಮೇರಂಗನ ಬೆಟ್ಟದ ಸುತ್ತಮುತ್ತ 8 ಸಾವಿರ ಗಿಡ ನೆಟ್ಟಿದ್ದು, ಇದೀಗ ನಕ್ಷತ್ರ ವನ ಮತ್ತು ರಾಶಿವನದ ಉದ್ಯಾನಕ್ಕೆ ಚಾಲನೆ ನೀಡಿದ್ದೇವೆ ಎಂದು ಆರ್ಟ್ ಆಫ್ ಲೀವಿಂಗ್ ನ ಕಾರ್ಯಕ್ರಮಾಧಿಕಾರಿ ಶ್ರೀನಿವಾಸರೆಡ್ಡಿ ಹೇಳಿದರು.

ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಗ್ರಾಮದ ಮಹಿಮೆರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಎಚ್.ಎ.ಎಲ್ ಸಂಸ್ಥೆ ಹಾಗೂ ಆರ್ಟ್ ಆಫ್ ಲೀವಿಂಗ್ ನ ಅಂತಾರಾಷ್ಟ್ರೀಯ ಮಾನವೀಯ ಮೌಲ್ಯಗಳ ಅಂಗಸಂಸ್ಥೆ ಅಡಿಯಲ್ಲಿ ನಕ್ಷತ್ರವನ ಮತ್ತು ರಾಶಿವನ ಉದ್ಯಾನವನಕ್ಕೆ ಗಿಡನೆಡುವುದರೊಂದಿಗೆ ಚಾಲನೆ ನೀಡಿ ಮಾತನಾಡಿದರು.

ಕುಮುದ್ವತಿ ಜಲಾನಯನ ಪ್ರದೇಶದಲ್ಲಿ 85 ಸಾವಿರ ಗಿಡಗಳನ್ನು ಈಗಾಗಲೇ ನಮ್ಮ ಜಂಟಿ ಸಂಸ್ಥೆಯ ಸಹಯೋಗದಲ್ಲಿ ನೆಡಲಾಗಿದ್ದು, ಪ್ರತಿಯೊಂದು ರಾಶಿಗೆ, ಮಳೆ ನಕ್ಷತ್ರಕ್ಕೆ ಅನುಗುಣವಾಗಿ ಗಿಡಗಳನ್ನು ನೆಡುವ ಕಾರ್ಯ ನಡೆದಿದೆ, ಮಹಿಮಾಪುರ ಬೆಟ್ಟದ ತುಂಬೆಲ್ಲಾ ನೀಲಗಿರಿ ಮರಗಳು ನೂರಾರು ವರ್ಷಗಳಿಂದ ಆವರಿಸಿದ್ದವು, ಮಹಿಮೇರಂಗ ಬೆಟ್ಟದ ಸ್ವಯಂಸೇವಕರ ಪ್ರೇರಣೆಯಿಂದ ಇದೀಗ 8 ಸಾವಿರ ಗಿಡಗಳನ್ನು ಬೆಟ್ಟದ ಸುತ್ತಮುತ್ತ ನೆಟ್ಟು ನೀಲಗಿರಿ ಮುಕ್ತ ಬೆಟ್ಟ ಮಾಡಿದ್ದೇವೆ ಎಂದರು.

ನಮ್ಮ ಕುಮುದ್ವತಿ ಜಲಾನಯನ ಪ್ರದೇಶವಾದ ಶಿವಗಂಗೆ, ಕೆರೆಕತ್ತಿಗನೂರು, ಹಾದಿಹೊಸಹಳ್ಳಿ, ಹಸಿರುವಳ್ಳಿ, ಮಣ್ಣೆ, ಗ್ರಾಮದಲ್ಲಿ ೮೫ ಸಾವಿರ ಗಿಡಗಳ ಜೊತೆ, ಕೆರೆ ಪುನಶ್ಚೇತನ, ಇಂಗುಗುಡಿ, ಚೆಕ್ ಡ್ಯಾಂ, ಕಾಲುವೆ ತಿರುವು ಯೋಜನೆ ಕೈಗೊಂಡಿದ್ದೇವೆ, ನಮ್ಮ ತಂಡದ ಭೂವಿಜ್ಞಾನಿ ಡಾ.ವೈ.ಲಿಂಗರಾಜು ರವರ ನೀರಿನ ರಕ್ಷಣೆ, ವನಗಳ ಸಂರಕ್ಷಣೆ, ಮಣ್ಣಿನ ಹದಗೊಳಿಸುವಿಕೆ ಮಾರ್ಗದರ್ಶನದಿಂದ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಸ್ವಯಂಸೇವಕ ರಮಾಕಾಂತ್ ಮಾತನಾಡಿ, ಈ ವನ ವೃತ್ತಕಾರವಾಗಿದ್ದು 27 ಮಳೆ ನಕ್ಷತ್ರ ಹಾಗೂ 12 ರಾಶಿಗಳಿಗೆ ಅನುಗುಣವಾಗಿ ಹತ್ತಿ, ಅರಳಿ, ಜುಂಬೂ ನೇರಳೆ, ಬಿದಿರು ಈ ಜಾತಿಯ ಗಿಡ ನೆಟ್ಟಿದ್ದೇವೆ, ಈ ಉದ್ಯಾನವನ್ನು ನಾಗರಿಕರು ಬಳಸಿಕೊಳ್ಳಬೇಕು, ಪ್ಲಾಸ್ಟಿಕ್ ಬಳಸದೇ ಗಿಡ ಪೋಷಿಸಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಮ್ಮ, ಸಂಸ್ಥೆಯ ಸ್ವಯಂ ಸೇವಕರಾದ ಕೃಷ್ಣ ಸಿಂಗ್, ಪಾಂಡುರಂಗ ಪ್ರಭು, ಶ್ಯಾಮ್ ಕಾಲುವೆ, ಕಿಸಾನ್ ಸಂಘದ ಪರಿಸರ ಪ್ರೇಮಿ ಸುರೇಶ್, ಪಾರುಪತ್ತೇದಾರ ಪುಟ್ಟೇಗೌಡ, ಅರ್ಚಕ ಶ್ಯಾಂ ಸುಂದರ್ ಹಾಜರಿದ್ದರು.