ಅಕ್ಟೋಬರ್‌ ೧೭ ರಂದು ವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆ: ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಸಂಘದ ಧರ್ಮಪ್ಪನಾಯಕ

| Published : Oct 16 2024, 12:42 AM IST

ಅಕ್ಟೋಬರ್‌ ೧೭ ರಂದು ವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆ: ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಸಂಘದ ಧರ್ಮಪ್ಪನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷವೂ ಸಂಸ್ಕೃತ ಸಾಹಿತ್ಯದ ಮೊದಲ ಕವಿ ಹಾಗೂ ಮಹಾನ್ ಋಷಿ, ಶ್ರೀ ರಾಮಾಯಣದ ಕರ್ತೃ ಶ್ರೀ ವಾಲ್ಮೀಕಿ ಮಹರ್ಷಿ ಅವರ ಜಯಂತಿಯನ್ನು ಅ.೧೭ ರಂದು ನಗರದಲ್ಲಿ ಆಚರಿಸಲಾಗುತ್ತಿದೆ ಎಂದು ಮಹರ್ಷಿ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧರ್ಮಪ್ಪನಾಯಕ ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಚ್‌.ಡಿ.ದೇವೇಗೌಡ ಉಪಸ್ಥಿತಿ

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಕೃತ ಸಾಹಿತ್ಯದ ಮೊದಲ ಕವಿ ಹಾಗೂ ಮಹಾನ್ ಋಷಿ, ಶ್ರೀ ರಾಮಾಯಣದ ಕರ್ತೃ ಶ್ರೀ ವಾಲ್ಮೀಕಿ ಮಹರ್ಷಿ ಅವರ ಜಯಂತಿಯನ್ನು ಅ.೧೭ ರಂದು ನಗರದಲ್ಲಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧರ್ಮಪ್ಪನಾಯಕ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಗೌರವಾನ್ವಿತ ಉಪಸ್ಧಿತಿ ವಹಿಸುವರು, ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಗೌರವ ಉಪಸ್ಧಿತಿ ವಹಿಸಲಿದ್ದಾರೆ. ಹಾಸನ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ನ, ಎ.ಮಂಜು, ಎಚ್.ಕೆ.ಸುರೇಶ್, ಸಿಮೆಂಟ್ ಮಂಜು, ಎಂಎಲ್‌ಸಿಗಳಾದ ಡಾ.ಸೂರಜ್, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಎಂ.ಎಸ್. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಅಪ್ಪಾಜಿಗೌಡ ಟಿ.ಹೆಚ್ ಅವರು ವಿಶೇಷ ಉಪನ್ಯಾಸ ನೀಡುವರು. ಹಾಸನಾಂಬ ಕಲಾಕ್ಷೇತ್ರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೂ ಮುನ್ನ ಬೆಳಿಗ್ಗೆ ೧೦ ಗಂಟೆಗೆ ಡಿಸಿ ಕಚೇರಿ ಆವರಣದಿಂದ ಹಾಸನಾಂಬ ಕಲಾಕ್ಷೇತ್ರದವರಿಗೂ ಮಹರ್ಷಿ ಅವರ ಭಾವಚಿತ್ರ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಜರುಗಲಿದೆ ಎಂದು ಹೇಳಿದರು.

ಇಂತಹ ಮಹಾನ್ ವ್ಯಕ್ತಿಯ ಜನ್ಮದಿನದಂದು ಸಮಾಜದ ಪ್ರತಿಯೊಬ್ಬ ಮುಖಂಡರು, ಸಮುದಾಯದ ಬಂಧುಗಳು, ದಲಿತ ಚಳವಳಿ ಹೋರಾಟಗಾರರು, ದಲಿತ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಾಟಕ ಪ್ರದರ್ಶನ:

ಕಾರ್ಯಕ್ರಮ ಮುಗಿದ ನಂತರ ನಮ್ಮ ಸಂಘದ ಕಲಾವಿದರ ವತಿಯಿಂದ ಮಹರ್ಷಿ ವಾಲ್ಮೀಕಿ ವಿರಚಿತ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನದಿಂದ ರಾತ್ರಿವರೆಗೂ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

೯ ಮಂದಿಗೆ ಸನ್ಮಾನ:

ವೇದಿಕೆ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ-ವರ್ಗಗಳ ಸಮುದಾಯಕ್ಕೆ ಅಹರ್ನಿಶಿ ದುಡಿದಿರುವ ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಡಿ.ಆರ್.ಬಸವರಾಜು, ಈರಪ್ಪ ಸೇರಿದಂತೆ ೯ ಮಂದಿಯನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದು ವಿವರಿಸಿದರು. ಜತೆಗೆ ಸಮುದಾಯದ ಏಳಿಗೆಗಾಗಿ ದುಡಿದು ಇತ್ತೀಚೆಗೆ ನಿಧನರಾದ ಜಿ.ಒ.ಮಹಾಂತಪ್ಪ ಅವರಿಗೆ ಶ್ರದ್ಧಾಂಜಲಿ ಮತ್ತು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು

ಕಾರ್ಯಾಧ್ಯಕ್ಷ ಮಧುನಾಯಕ್, ಉಪಾಧ್ಯಕ್ಷ ರಾಜಶೇಖರ್, ಕಲಾವಿದರಾದ ನಾಗರಾಜು ಟಿ ಮತ್ತು ಆಟೋ ನಾಗರಾಜ್ ಇದ್ದರು.