ಚನ್ನಪಟ್ಟಣ: ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಶನಿವಾರ ಮ್ಯಾರಥಾನ್ ಓಟ, ಗ್ರಾಮ ದೇವತೆಗಳ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿತು.

ಚನ್ನಪಟ್ಟಣ: ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಶನಿವಾರ ಮ್ಯಾರಥಾನ್ ಓಟ, ಗ್ರಾಮ ದೇವತೆಗಳ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿತು.

ನಗರದ ಮಂಗಳವಾರಪೇಟೆಯಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಸಿ.ಪಿ.ಯೋಗೇಶ್ವರ್ ಗ್ರಾಮದೇವತೆಗಳ ಉತ್ಸವಕ್ಕೆ ಚಾಲನೆ ನೀಡಿದರು. ಬಸವನಗುಡಿ ಬಳಿಯಿಂದ ಬೆಂ-ಮೈ ಹೆದ್ದಾರಿಯಲ್ಲಿ ಸಾಗಿದ ಗ್ರಾಮದೇವತೆಗಳ ಮೆರವಣಿಗೆ ಬೊಂಬೆನಾಡ ಗಂಗೋತ್ಸವ ನಡೆಯುತ್ತಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ ತಲುಪಿತು.

ಗ್ರಾಮ ದೇವತೆಗಳ ಮೆರವಣಿಗೆಗೆ ಜಾನಪದ ಕಲೆ ಮತ್ತು ಕಲಾವಿದರು ರಂಗು ತುಂಬಿದರು. ಕಲಾವಿದರು ನಗಾರಿ ಮತ್ತು ತಮಟೆ, ವೀರಗಾಸೆ, ಕಂಸಾಳೆ, ಪಟದ ಕುಣಿತ, ಡೊಳ್ಳು ಕುಣಿತ, ಗಾರುಡಿ ಗೊಂಬೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಭಕ್ತರ ಕಣ್ಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನ ಕಲಾ ವೈಭವದ ಉತ್ಸವವನ್ನು ಕಣ್ತುಂಬಿಕೊಂಡರು.

ಮ್ಯಾರಥಾನ್:

ಬೊಂಬೆನಾಡ ಗಂಗೋತ್ಸವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ೬.೩೦ಕ್ಕೆ ಮ್ಯಾರಥಾನ್ ಓಟಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಮಂದಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ನಗರದ ಬಾಲಕರ ಸರ್ಕಾರಿ ಶಾಲೆ ಮೈದಾನದಿಂದ ಆರಂಭಗೊಂಡ ಮ್ಯಾರಥಾನ್ ಓಟ ನಗರದ ಅಂಚೆ ಕಚೇರಿ ಮೂಲಕ ಸಾಗಿ ಎಂ.ಜಿ.ರಸ್ತೆ ಮುಖಾಂತರ ಬೆಂ-ಮೈ ಹೆದ್ದಾರಿಯಲ್ಲಿ ಸಾಗಿ ನಗರದ ನ್ಯಾಯಾಲಯ ವೃತ್ತದಲ್ಲಿ ಯೂಟರ್ನ್ ಪಡೆದು ಬೆಂ-ಮೈ ಹೆದ್ದಾಯ ಮುಖಾಂತರ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ ತಲುಪಿತು.

ಬೊಂಬೆನಾಡ ಗಂಗೋತ್ಸದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕಬಡ್ಡಿ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆದವು. ೧ರಿಂದ ೪ನೇ ತರಗತಿ, ೫ರಿಂದ ೭ನೇ ತರಗತಿ ಮತ್ತು ೮ರಿಂದ ೧೦ತರಗತಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಮಹಿಳೆಯರಿಗೆ ಕೇಶ ವಿನ್ಯಾಸ ಸ್ಪರ್ಧೆ, ಜಾನಪದ-ದೇಶಭಕ್ತಿ ಗೀತೆಗಳ ಸಮೂಹ ನೃತ್ಯ ನಡೆಯಿತು.

ಪ್ರತಿಭಾ ಪುರಸ್ಕಾರ:

ಶನಿವಾರ ಮಧ್ಯಾಹ್ನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೭೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕಿನ ವಿವಿಧ ಶಾಲೆ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಗರ ಮತ್ತು ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿ ಪತ್ರಿಭಾ ಪುರಸ್ಕಾರ ಪಡೆದರು. ಬೊಂಬೆನಾಡ ಗಂಗೋತ್ಸವದಲ್ಲಿ ಭಾಗವಹಿಸುವ ಎಲ್ಲರಿಗೂ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಬಾಕ್ಸ್...................

ಮೆರವಣಿಗೆ ಆಕರ್ಷಣೆಯ ಕೇಂದ್ರಬಿಂದು ಆನೆ

ಬೊಂಬೆನಾಡ ಗಂಗೋತ್ಸದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಗ್ರಾಮದೇವತೆಗಳ ಉತ್ಸವಕ್ಕೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಸಂಸ್ಥಾನ ಮಠದಿಂದ ಲಕ್ಷ್ಮಿ ಎಂಬ ಆನೆಯನ್ನು ಕರೆತರಲಾಗಿದ್ದು, ಆನೆ ಮೆರವಣಿಗೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಆನೆಯ ಮೇಲೆ ಅಂಬಾರಿ ಇರಿಸಿ ಗೌಡಗೆರೆಯ ಶ್ರೀ ಚಾಮಂಡೇಶ್ವರಿ ವಿಗ್ರಹ ಮೆರವಣಿಗೆ ನಡೆಸುವ ಪ್ರಯತ್ನ ನಡೆಯಿತಾದರೂ, ಅಂಬಾರಿ ಸರಿಯಾಗಿ ಕೂರದ ಕಾರಣ ಅಂಬಾರಿಯನ್ನು ಇಳಿಸಿ ಟಾಟಾ ಏಸ್ ಗಾಡಿ ಮೇಲೆ ಅಂಬಾರಿ ಕೂರಿಸಿ ಮೆರವಣಿಗೆ ನಡೆಸಲಾಯಿತು.

ಮೊದಲಿಗೆ ಆನೆ, ಆನೆಯ ಹಿಂದೆ ಚಾಮುಂಡೇಶ್ವರಿ ದೇವಿ ವಿಗ್ರಹದ ಅಂಬಾರಿ ಹೊತ್ತ ಗಾಡಿ ನಂತರ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ವಿವಿಧ ಗ್ರಾಮದೇವತೆಗಳ ಮೆರವಣಿ ನಡೆಯಿತು. ಆನೆಗೆ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಅವರ ಪತ್ನಿ ಶೀಲಾ ಯೋಗೇಶ್ವರ್ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಇನ್ನು ಆನೆಯೊಂದಿಗೆ ನಗರದ ಸ್ಪನ್ ಸಿಲ್ಕ್ ಮಿಲ್ ಆವರಣ ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜನ ಪೊಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಬಾಕ್ಸ್...................

ಇಂದಿನ ಕಾರ್ಯಕ್ರಮಗಳು

ಭಾನುವಾರ ಬೊಂಬೆನಾಡ ಗಂಗೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಭಾನುವಾರ ಸಾಧಕರ ಸಮಾವೇಶ, ನೌಕರರ ಸಮಾವೇಶ, ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ನಡೆಲಿದೆ. ಸಂಶೋಧಕ ಡಾ.ತಲಕಾಡು ಚಿಕ್ಕರಂಗೇಗೌಡ ಗಂಗರ ರಾಜಮನೆತನದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಸಂಜೆ ೫.೩೦ರಿಂದ ದೇಹದಾರ್ಢ್ಯ ಸ್ಪರ್ಧೆ ನಡೆಲಿದ್ದು, ಆ ನಂತರ ರಾಜೇಶ್ ಕೃಷ್ಣನ್ ಹಾಗೂ ನವೀನ್ ಸಜ್ಜು ಅವರ ತಂಡದಿಂದ ರಸಸಂಜೆ ಕಾರ್ಯಕ್ರಮ ನಡೆಲಿದೆ. ರಸ ಸಂಜೆ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ಜೋಗಿ ಪ್ರೇಮ್, ಡಾಲಿ ಧನಂಜಯ, ಬಿಗ್ ಬಾಸ್ ವಿಜೇತ ಗಿಲ್ಲಿ ಸೇರಿದಂತೆ ಹಲವು ಸಿನಿತಾರೆಯರ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ವಿಧಾನಪರಿಷತ್ ಸದಸ್ಯರಾದ ಪುಟ್ಟಣ, ಎಸ್.ರವಿ, ರಾಮೋಜಿಗೌಡ, ಸುಧಾಮದಾಸ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ಪೊಟೋ೨೪ಸಿಪಿಟಿ೧:

ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟಕ್ಕೆ ಶಾಸಕ .ಯೋಗೇಶ್ವರ್ ಚಾಲನೆ ನೀಡಿದರು.

ಪೊಟೋ೨೪ಸಿಪಿಟಿ೨:

ಬೊಂಬೆನಾಡ ಗಂಗೋತ್ಸವದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪೊಟೋ೨೪ಸಿಪಿಟಿ3:

ಬೊಂಬೆನಾಡ ಗಂಗೋತ್ಸವದ ಆಕರ್ಷಣೆಯ ಕೇಂದ್ರಬಿಂದವಾಗಿದ್ದ ಆನೆ.

ಪೊಟೋ೨೪ಸಿಪಿಟಿ4:

ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಗ್ರಾಮದೇವತೆಗಳ ಉತ್ಸವದಲ್ಲಿ ಭಾಗವಹಿಸಿದ್ದ ಜನಸ್ತೋಮ.