ಪ್ರತಿಭಟನೆ ನಡೆಸುವ ಹೆಸರಿನಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ, ಜನರ ಎತ್ತಿ ಕಟ್ಟುವ ಕೆಲಸವನ್ನು ಮಾಡುವ ಸ್ಥಳಕ್ಕೆ ನಾನು ಭೇಟಿ ನೀಡುವುದಿಲ್ಲ. ಅಧಿಕಾರಿಗಳ ಕರ್ತವ್ಯಗಳಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡದೆ ಅವರಿಗೆ ಸ್ವತಂತ್ರವಾಗಿ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಸುವಂತೆ ಸೂಚಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ವಿಚಾರವಾಗಿ ವಿರೋಧ ಪಕ್ಷದವರು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತಿದ್ದಾರೆ ಎಂದು ಕೆ.ಎಂ.ಉದಯ್ ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ಕೂಳಗೆರೆ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಪ್ರತಿಭಟನೆ ಹೆಸರಿನಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ನಾನು ಮಾಡುತ್ತಿರುವ ಕೆಲಸಗಳಿಗೆ ಕೆಲವರು ಅಡ್ಡಿ ಪಡಿಸಲು ಸಂಚು ರೂಪಿಸುತ್ತಿದ್ದಾರೆ. ಇದಕ್ಕೆ ಕಿವಿಗೊಡುವುದಿಲ್ಲ ಎಂದರು.

ಅಧಿಕಾರದಲ್ಲಿದ್ದಾಗ ಜೆಡಿಎಸ್ ನವರು ಪೊಲೀಸ್ ಅಧಿಕಾರಿಗಳನ್ನು ಗುಲಾಮರನ್ನಾಗಿಸಿಕೊಂಡು ಅಮಾಯಕರ ಮೇಲೆ ಸುಳ್ಳು ಕೇಸು ದಾಖಲಿಸಿ ದರ್ಪ ಮೆರೆದಿದ್ದಾರೆ ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಆರೋಪಕ್ಕೆ ಪರೋಕ್ಷವಾಗಿ ಕಿಡಿಕಾರಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಡಿ ರಾಷ್ಟ್ರಪತಿ, ಪ್ರಧಾನ ಮಂತ್ರಿವರೆಗೆ ಪ್ರತಿಭಟಿಸುವ ಹಕ್ಕನ್ನು ನೀಡಿದ್ದಾರೆ. ಅದೇ ರೀತಿ ಗೆಜ್ಜಲಗೆರೆ ಗ್ರಾಮದಲ್ಲಿ ನಗರಸಭೆಗೆ ಗ್ರಾಪಂ ಸೇರ್ಪಡೆ ವಿರೋಧಿಸಿ ಹೋರಾಟಗಾರರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭಾಗವಹಿಸುವುದಕ್ಕೆ ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಪ್ರತಿಭಟನೆ ನಡೆಸುವ ಹೆಸರಿನಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ, ಜನರ ಎತ್ತಿ ಕಟ್ಟುವ ಕೆಲಸವನ್ನು ಮಾಡುವ ಸ್ಥಳಕ್ಕೆ ನಾನು ಭೇಟಿ ನೀಡುವುದಿಲ್ಲ. ಅಧಿಕಾರಿಗಳ ಕರ್ತವ್ಯಗಳಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡದೆ ಅವರಿಗೆ ಸ್ವತಂತ್ರವಾಗಿ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಸುವಂತೆ ಸೂಚಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ರಾಜ್ಯಪಾಲರು ಓದದೆ ದೇಶದ ಸಂವಿಧಾನ, ರಾಷ್ಟ್ರಗೀತೆ ಹಾಗೂ ರಾಜ್ಯಪಾಲರ ಹುದ್ದೆಗೆ ಅಗೌರವ ತೋರಿದ್ದಾರೆ. ಮನರೇಗಾ ಹೆಸರನ್ನು ತೆಗೆದು ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಕೂಲಿಕಾರರ ಹಕ್ಕನ್ನು ಕಸಿಯುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತರಲು ಪ್ರಯತ್ನಸುತ್ತಿರುವುದನ್ನು ಖಂಡಿಸಿ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಓದದೇ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಏಜೆಂಟ್ ರಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.