ಸಾರಾಂಶ
ಅಳ್ನಾವರ : ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರಾರ್ಥ ಸಭೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದ ಅವರು, ಪ್ರತಿಯೊಬ್ಬರು ತಪ್ಪದೆ ಕಮಲದ ಬಟನ್ ಒತ್ತುವ ಮೂಲಕ 400ಕ್ಕೂ ಅಧಿಕ ಸ್ಥಾನ ಗಳಿಸುವ ಸಂಕಲ್ಪವನ್ನು ಈಡೇರಿಸಬೇಕೆಂದು ಕರೆ ನೀಡಿದರು. ಲೋಕಸಭೆಯ ಚುನಾವಣೆಯ ನಂತರ ರಾಜ್ಯದಲ್ಲಿಯೂ ಬದಲಾವಣೆಯ ಮುನ್ಸೂಚನೆ ಎದ್ದು ಕಾಣುತ್ತಿದೆ ಎಂದು ಹೇಳುವ ಮೂಲಕ ರಾಜಕೀಯ ಸಂಚಲನ ಮೂಡಿಸಿದರು.
ಜಗತ್ತಿನಲ್ಲಿ ಭಾರತವನ್ನು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆರಿಸಿದ ಮಹಾನ ಶಕ್ತಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪ್ರಹ್ಲಾದ ಜೋಶಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು. ಈಗ ನಡೆಯುತ್ತಿರುವ ಚುನಾವಣೆ ದೇಶದ ಬೆಳವಣಿಗೆಗಾಗಿ ನಡೆಯುವ ಚುನಾವಣೆಯಾಗಿದೆ. ಈ ಚುನಾವಣೆ ಆತ್ಮನಿರ್ಭರ ಭಾರತ ಮತ್ತು ರಾಮರಾಜ್ಯ ನಿರ್ಮಾಣದ ಚುನಾವಣೆಯಾಗಿದೆ. ಇದನ್ನೆಲ್ಲ ಅರಿತುಕೊಂಡು ದೇಶದ ಸುಭದ್ರತೆ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅವಶ್ಯವಿದೆ ಎಂದರು.
ಮೋದಿ ಅವರನ್ನು ಸೋಲಿಸಲು ಎಲ್ಲ ವಿಪಕ್ಷಗಳು ಒಂದಾಗಿವೆ. ಆದರೂ ಸೋಲಿಸಲು ಸರಳವಾದ ಕಾರ್ಯವಲ್ಲ. ದೇಶ ಸೇವೆಯನ್ನೆ ತನ್ನ ಜೀವನವನ್ನಾಗಿಸಿಕೊಂಡಿರುವ ವ್ಯಕ್ತಿ ನಮಗೆ ಬೇಕಾಗಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಜಗತ್ತಿನಲ್ಲಿ ಒಂದನೇ ಸ್ಥಾನಕ್ಕೆ ತರಲು ಕಂಕಣ ಬದ್ಧರಾಗಿರುವ ಮೋದಿ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.
ದೇಶದ ನೂರಾರು ಕೋಟಿ ಜನರ ಭಾವನೆಯಂತೆ ರಾಮಮಂದಿರ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಒಂದು ದೇಶ ಒಂದು ಧ್ವಜ ಎನ್ನುವುದನ್ನು ಮೋದಿ ಸಾಬೀತು ಮಾಡಿದ್ದಾರೆ ಎಂದಿರುವ ಶಿಂಧೆ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಜೋಶಿ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಒತ್ತಿ ಹೇಳಿದರು.
ಅಭ್ಯರ್ಥಿ ಪ್ರಹ್ಲಾದ ಜೋಶಿ ಮಾತನಾಡಿ, ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸಚಿವನಾಗಿದ್ದು ಯಾವತ್ತು ತಲೆತಗ್ಗಿಸುವಂತಹ ಕೆಲಸ ಮಾಡಿಲ್ಲ. ಅಭಿವೃದ್ಧಿಗಾಗಿ ಪ್ರಾಮಾಣಿಕವಾದ ಕೆಲಸ ಮಾಡಿ ಸಂಪೂರ್ಣ ಸಮಯವನ್ನು ಜನರ ಸೇವೆಗಾಗಿಯೇ ಮೀಸಲಿಟ್ಟಿದ್ದೇನೆ. ಮೋದಿ ಭಾರತವನ್ನು ಜಗತ್ತಿನಲ್ಲಿ ಬೃಹತ್ ಶಕ್ತಿಯನ್ನಾಗಿ ಪರಿವರ್ತಿಸಿದ್ದಾರೆ ಎಂದರು.
ಇದೇ ವೇಳೆ ಜಿಪಂ ಮಾಜಿ ಸದಸ್ಯ ನಿಂಗಪ್ಪ ಘಾಟೀನ, ಟಿ.ಬಿ. ಬಡಿಗೇರ ಮತ್ತಿತರರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಈ ವೇಳೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ಅರವಿಂದ ಪಾಟೀಲ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಶರಣು ಅಂಗಡಿ, ಕಲ್ಮೇಶ ಬೇಲೂರ, ಡಾ. ಸಂಜಯ ಚಂದರಗಿಮಠ,ನಾರಾಯಣ ಮೋರೆ ಇದ್ದರು