ಸಮಯ ಹಾಗೂ ತಾಳ್ಮೆಯ ಕೊರತೆಯ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಹೆಚ್ಚು ಮಹತ್ವ ಪಡೆದಿದೆ. ಚುಟುಕು ಸಾಹಿತ್ಯ ಪ್ರಾಥಮಿಕ ಶಾಲಾಮಟ್ಟದಿಂದ ಪಠ್ಯದಲ್ಲಿ ಅಳವಡಿಕೆಯಾಗಲಿ ಎಂದು ಮಾಜಿ ಸಹಕಾರ ಸಚಿವ, ಹಿರಿಯ ಚಿಂತಕ ಎಸ್.ಎಸ್. ಪಾಟೀಲ ಹೇಳಿದರು.

ಹಾವೇರಿ: ಸಮಯ ಹಾಗೂ ತಾಳ್ಮೆಯ ಕೊರತೆಯ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಹೆಚ್ಚು ಮಹತ್ವ ಪಡೆದಿದೆ. ಚುಟುಕು ಸಾಹಿತ್ಯ ಪ್ರಾಥಮಿಕ ಶಾಲಾಮಟ್ಟದಿಂದ ಪಠ್ಯದಲ್ಲಿ ಅಳವಡಿಕೆಯಾಗಲಿ ಎಂದು ಮಾಜಿ ಸಹಕಾರ ಸಚಿವ, ಹಿರಿಯ ಚಿಂತಕ ಎಸ್.ಎಸ್. ಪಾಟೀಲ ಹೇಳಿದರು.

ಸ್ಥಳೀಯ ಹೊಸಮಠದ ಬಸವ ಸಮುದಾಯದ ಭವನದಲ್ಲಿ ಗುರುವಾರ ಜರುಗಿದ ಅಖಂಡ ಧಾರವಾಡ ಜಿಲ್ಲಾ ೧೨ನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶರಣರ ವಚನಗಳು, ಜನಪದ ತ್ರಿಪದಿಗಳೇ ಚುಟುಕು ಸಾಹಿತ್ಯದ ಮೂಲ ಎಂದು ಹೇಳಿ ಅನೇಕ ಚುಟುಕುಗಳನ್ನು ಉದಾಹರಿಸಿದರು.

ತಮ್ಮ ತಾಯಿ ದಿ. ಗಂಗಮ್ಮ ಪಾಟೀಲ ಹೆಸರಿನಲ್ಲಿ ಒಂದು ಲಕ್ಷ ರು. ಮೊತ್ತದ ಚೆಕ್ ನೀಡಿ ದತ್ತಿನಿಧಿ ಕಾರ್ಯಕ್ರಮ ನಡೆಸಲು ಹೇಳಿದರು.

ಸರ್ವಾಧ್ಯಕ್ಷರಾದ ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಜನಪರ ಕಾಳಜಿ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಸಮಾಜ ಹಾಗೂ ಸರ್ಕಾರದ ಮೇಲೆ ಪಂಚ್ ನೀಡಿ ಜಾಗೃತಿ ಮೂಡಿಸುವ ಕಾರ್ಯದಲ್ಲಿದೆ ಎಂದು ಹೇಳಿ ರಾಜಕೀಯ ವಿಡಂಬನೆ ಕುರಿತು ಚುಟುಕು ವಾಚಿಸಿದರು.

ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರೊ. ಸನದಿ ಹಾಗೂ ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳಿಗೆ " ವಿಶಾಲಾಕ್ಷಿ ದೇಶಪಾಂಡೆ ಗೌರವ ಪ್ರಶಸ್ತಿ " ನೀಡಿ ಗೌರವಿಸಲಾಯಿತು.

ಹಿರಿಯ ಕವಿಗಳಾದ ಸಿ.ಎಸ್. ಅರಸನಾಳ, ಶೇಖರಗೌಡ ಪಾಟೀಲ, ಕುಮುದಾ ದೇಶಪಾಂಡೆ, ಸುಧಾ ಕಬ್ಬೂರ, ಪ್ರಭು ಸ್ವಾಮಿ ಹಾಲಿವಾಡಿಮಠ ಮಾತನಾಡಿದರು. ಗುರುಕಲ್ಮಠ ಅಭಿನಂದನಾ ಭಾಷಣ ಮಾಡಿದರು. ಡಾ. ರಾಜೇಂದ್ರ ಗಡಾದ, ಡಾ. ಜಿ.ಎ. ಹೆಗಡೆ, ಚನ್ನಬಸಪ್ಪ ಧಾರವಾಡ ಶೆಟ್ರು, ಸುರೇಶ ಹೊಸಮನಿ,ವಿರೂಪಾಕ್ಷ ಲಮಾಣಿ ಮಾತನಾಡಿದರು, ಸಾನ್ವಿ ತೇಗೂರ, ಕುಲಕರ್ಣಿ ಮತ್ತು ಅವನೀಶ ನೀಲಗುಂದ ಏಕಪಾತ್ರ ಅಭಿನಯ ನೀಡಿದರು, ವಂದನಾ ರಮೇಶ ನಾಡಗೀತೆ, ಘಟಕದ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು, ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಗಂಗಯ್ಯ ಕುಲಕರ್ಣಿ ನಿರೂಪಿಸಿದರು. ನಿಂಗಪ್ಪ ಆರೇರ ವಂದಿಸಿದರು.