ಹೂವಿನಹಡಗಲಿ: ವಿದ್ಯುತ್‌ ಕಾಯಿದೆ ತಿದ್ದುಪಡಿ ಮಸೂದೆ ತರುವ ಮೂಲಕ ರೈತರ ಪಂಪ್‌ ಸೆಟ್‌ಗಳಿಗೆ, ಪ್ರೀಪೇಡ್‌ ವಿದ್ಯುತ್‌ ಸರಬರಾಜು ಖಾಸಗೀಕರಣದ ಕರಾಳ ಕಾನೂನು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಎಂದು ದೂರಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರೀಪೇಡ್‌ ಮೀಟರ್ ಬಂತು, ರೈತರಿಗೆ ಆಪತ್ತು ತಂತು ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.

ಈ ಕರಾಳ ಮಸೂದೆ ಕೃಷಿ ಕ್ಷೇತ್ರ ಮತ್ತು ರೈತ ಸಮುದಾಯ ಸಂಪೂರ್ಣ ವಿನಾಶದ ಹಾದಿ ಹಿಡಿಯುವಂತೆ ಮಾಡುತ್ತದೆ. ವಿದ್ಯುತ್ ಕಾಯಿದೆ ತಿದ್ದುಪಡಿಯಲ್ಲಿ ಎರಡೂ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ. ಆ ಮೂಲಕ ರೈತರಿಂದ ಭೂಮಿ ಕಸಿಯುವಂತಹ ಕುತಂತ್ರ ನಡೆಯುತ್ತಿದೆ. ಕಳೆದ 5 ವರ್ಷಗಳಿಂದ ದೇಶದಲ್ಲಿ ಶೇ.18ರಷ್ಟು ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಯಾವುದೇ ಸರ್ಕಾರಗಳು ರೈತರ ಪರ ನಿಂತಿಲ್ಲ. ಅಷ್ಟೇ ಏಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುವ ಈ ಬಾರಿಯ ಬಜೆಟ್ ಕೂಡ ರೈತರಿಗೆ ಸಹಕಾರಿಯಾಗಿರುವುದಿಲ್ಲ. ನಮ್ಮ ಹೋರಾಟ ತೀವ್ರಗೊಳಿಸದ ಹೊರತು ಗೆಲವು ಸಾಧ್ಯವಿಲ್ಲ ಎಂದರು.

ಸರ್ಕಾರದಿಂದ ನಮಗೆ ಯಾವುದೇ ರಿಯಾಯ್ತಿ, ಉಚಿತ ಸೌಲಭ್ಯಗಳು ಬೇಕಿಲ್ಲ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಟ್ಟರೆ ಆದಾಯ ತೆರಿಗೆಯನ್ನೂ ಪಾವತಿಸುತ್ತೇವೆ. ಕರ್ನಾಟಕದ ಯಾವ ವಿಶ್ವ ವಿದ್ಯಾನಿಲಯಗಳು ಈ ವರೆಗೂ ರೈತರ ಪರ ಕನಿಷ್ಠ ಕಾಳಜಿ ವಹಿಸಿ ಅಧ್ಯಯನ ಮಾಡಿಲ್ಲ. ಜನಪ್ರತಿನಿಧಿಗಳು ವೈಜ್ಞಾನಿಕ ಬೆಲೆಗೆ ಸದನದಲ್ಲಿ ಧ್ವನಿ ಎತ್ತದೇ ಕೃಷಿ ಅಧ್ಯಯನದ ನೆಪದಲ್ಲಿ ಮೋಜು ಮಸ್ತಿಗಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕೋವಿಡ್ ವೇಳೆ ದೇಶದ 580 ಮಹಾನಗರಗಳು 480 ಸಂಸ್ಥೆಗಳು ಲಾಕ್‌ಡೌನ್ ಆಗಿದ್ದರೂ 8 ಲಕ್ಷ ಹಳ್ಳಿಗಳು ವಹಿವಾಟು ಸ್ಥಗಿತಗೊಳಿಸದೇ ಆಹಾರ, ತರಕಾರಿ ಬೆಳೆದು ಜನರ ಹೊಟ್ಟೆ ತುಂಬಿಸಿ ಮರುಜನ್ಮ ಕೊಟ್ಟಿದ್ದಾರೆ. ಯಾವುದೇ ಕಾಯಿದೆಗಳು ಉದ್ದಿಮೆಯ ಪರವಾಗಿಯೇ ತಿದ್ದುಪಡಿಯಾಗುತ್ತಿವೆಯೇ ಹೊರತು, ರೈತ ಪರವಾಗಿಲ್ಲದಿರುವುದು ಖೇದಕರ ಎಂದರು.


ಹೊಸಪೇಟೆಯಲ್ಲಿ ಫೆ. 23ರಂದು ಜಿಲ್ಲಾ ಪದಾಧಿಕಾರಿಗಳ ಸಭೆ ಇದೆ. ಜಿಲ್ಲೆಯ ಎಲ್ಲ ಪದಾಧಿಕಾರಿಗಳು, ಸಂಘದ ಸದಸ್ಯರು ಆಗಮಿಸಬೇಕು ಎಂದು ಮನವಿ ಮಾಡಿದರು.

ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಉಪಾಧ್ಯಕ್ಷ ವಿಠಲನಾಯ್ಕ, ಸಂಚಾಲಕರಾದ ಘನಿಸಾಬ್, ದಾವಲಸಾಬ್, ದುರುಗಪ್ಪ, ಗಿರೀಶ ನಾಯ್ಕ, ಮಂಜುನಾಥ, ವೆಂಕಟೇಶ ನಾಯ್ಕ ಸೇರಿದಂತೆ ಇತರರಿದ್ದರು.