ದಾಬಸ್‍ಪೇಟೆ: ಕೆಐಎಡಿಬಿ ಉದ್ದೇಶಿತ ಕ್ವಿನ್ ಸಿಟಿ ಯೋಜನೆಗೆ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೇಹಳ್ಳಿ, ಬಳ್ಳಗೆರೆ, ಕೆಂಚನಪುರ ಗ್ರಾಮದ 1009.61 ಎಕರೆ (408.54 ಹೆ.) ಭೂಸ್ವಾಧೀನದ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯುಷಾ ಪಾಲ್ಗೊಂಡಿದ್ದರು.
ಸಭೆಯಲ್ಲಿ ರೈತರಾದ ರುದ್ರೇಶ್, ಸಿದ್ದೇಗೌಡ ಇತರರು ಮಾತನಾಡಿ, ಪರಿಸರ ಆಲಿಕೆ ಸಭೆಯನ್ನು ಭೂಮಿ ಒತ್ತುವರಿ ಮಾಡುವ ಮುನ್ನ ಆಯೋಜಿಸಬೇಕಿತ್ತು. ಈ ಸಭೆ ಅಪ್ರಸ್ತುತ, ಭೂಮಿ ಕಳೆದುಕೊಂಡ ನಮಗೆಲ್ಲಾ ನೋವಾಗಿದೆ. ಕೆಲ ರೈತರು ಈಗಾಗಲೇ ಪರಿಹಾರದ ಹಣ ಪಡೆದು ರೈತರ ಹೋರಾಟಕ್ಕೆ ಹಿನ್ನಡೆ ಉಂಟು ಮಾಡಿದ್ದಾರೆ. ಇನ್ನೂ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಮ್ಮ ಭಾಗಕ್ಕೆ ಕೆಂಪು ಕಾರ್ಖಾನೆಗಳು ಬೇಡ ಎಂದು ಸಭೆಗೆ ತಿಳಿಸಿದರು.ಸ್ಥಳೀಯ ಹಾಗೂ ಪರಿಸರ ಪ್ರೇಮಿ ಡಾ.ಜಿ.ಬೈರೇಗೌಡ ಮಾತನಾಡಿ, ನಮ್ಮ ಪ್ರದೇಶ ತಿಪ್ಪಗೊಂಡನಹಳ್ಳಿ ಜಲಾಶಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದ್ದರಿಂದ ಕ್ವಿನ್ ಸಿಟಿ ಮಾಡಲು ಸರ್ಕಾರ ಮುಂದಾಗಿದೆ. ಪರಿಸರ ಆಲಿಕೆ ವರದಿಯಲ್ಲಿ ನಮ್ಮ ಜಮೀನಿನ್ನು ಬರಡು ಭೂಮಿ ಎಂದಿದ್ದಾರೆ. ನಮ್ಮ ಜಮೀನು ಉತ್ತಮ ಗಿಡಮರಗಳು, ಅಂತರ್ಜಲ ಮಟ್ಟವನ್ನು ಒಳಗೊಂಡಿದೆ. ಆದರೆ, ವರದಿಯಲ್ಲಿ ಬರಡು ಭೂಮಿ ಎಂದು ಯಾಕೆ ನಮೂದಿಸಿದ್ದೀರಾ? ಇಲ್ಲಿ ಕೆಂಪು ಕಾರ್ಖಾನೆ ಮಾಡುವುದು ಸರಿಯಲ್ಲ, ಈ ಸಭೆಯನ್ನು ಭೂಮಿ ಒತ್ತುವರಿ ಮಾಡುವ ಮುನ್ನ ಕೈಗೊಳ್ಳಬೇಕಿತ್ತು. ಕ್ವಿನ್ ಸಿಟಿ ಯೋಜನೆ ಕೈಬಿಡಬೇಕು. ಇಲ್ಲದಿದ್ದರೆ ಕಾರ್ಖಾನೆ ಜೊತೆಗೆ ಪರಿಸರ ಅಭಿವೃದ್ಧಿ ಮಾಡಲಿ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಗ್ರಾಮಗಳನ್ನೇ ಮಲಿನ ಮಾಡುವುದು ಎಷ್ಟು ಸರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಭಾರತೀಯ ಮತದಾರರ ವೇದಿಕೆ ಅಧ್ಯಕ್ಷ ಕೊಡಿಗೇಹಳ್ಳಿ ಮಂಜುನಾಥ್ ಮಾತನಾಡಿ, ಮತದಾರರು ಜಾಗೃತರಾದಾಗ ಮಾತ್ರ ರೈತರ ಭೂಮಿ ಒತ್ತುವರಿ, ಇಂತಹ ಜ್ವಲಂತ ಸಮಸ್ಯೆಗಳನ್ನು ತಡೆಯಬಹುದು. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡರೆ, ಇದನ್ನೇ ನಾವು ಅನುಭವಿಸಬೇಕಾಗುತ್ತದೆ. ರಿಯಲ್ ಎಸ್ಟೇಟ್ ಮಾಫಿಯಾಗೆ ಬಲಿಯಾಗಬೇಕಾಗುತ್ತದೆ. ರೈತರು ಜಮೀನು ಕಳೆದುಕೊಂಡು, ಹಣವನ್ನು ಅನಗತ್ಯವಾಗಿ ವ್ಯಯಿಸಿ ಬೀದಿಗಿ ಬೀಳುತ್ತಾನೆ, ಇನ್ನಾದರು ರೈತರು ಜಾಗೃತರಾಗಬೇಕು ಎಂದು ಹೇಳಿದರು.ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್, ಕೆಐಎಡಿಬಿ ಅಭಿವೃದ್ದಿ ಅಧಿಕಾರಿ ಲೀಲಾವತಿ, ವಿಶೇಷ ಭೂಸ್ವಾಧೀನಧಿಕಾರಿ ಶಿವೇಗೌಡ, ಪರಿಸರ ಅಧಿಕಾರಿ ಪದ್ಮನಾಭ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಂಕರ್, ಸಹಾಯಕ ಎಂಜಿನಿಯರ್ ಗಳಾದ ಅಮಿತ್, ಪುನೀತ್, ಮೋನಿಕ, ಅನಿಲ್, ವಿನೋದ್, ಪಿಡಿಓ ಸಾವಿತ್ರಮ್ಮ, ವಿವಿಧ ಇಲಾಖೆ ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.ಕೋಟ್........
ರೈತರ ಅಹವಾಲು ಸರ್ಕಾರಕ್ಕೆ ತಿಳಿಸುತ್ತೇನೆ, ಪರಿಸರ ನಿರ್ಮಾಣ ಕ್ರಿಯಾ ಯೋಜನೆಯಲ್ಲಿ ಕೆಲವೊಂದು ಲೋಪಗಳನ್ನು ಸರಿಪಡಿಸಲು ತಿಳಿಸುತ್ತೇನೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕೊಳವೆ ಬಾವಿಗಳಿಗೆ, ರಾಸಾಯನಿಕ ಹರಿಯದಂತೆ ಸಂಪೂರ್ಣ ಎಚ್ಚರಿಕೆ ಕ್ರಮ ವಹಿಸುತ್ತೇವೆ. ಕೈಗಾರಿಕಾ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯದಂತೆ ಕಠಿಣ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿ, ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತೇನೆ. ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಅನುಪಯುಕ್ತ ಕೊಳವೆಬಾವಿ ಪರಿಶೀಲಿಸುತ್ತೇನೆ.
-ಸೈಯಿದಾ ಆಯುಷಾ, ಅಪರ ಜಿಲ್ಲಾಧಿಕಾರಿ, ಬೆಂ.ಗ್ರಾ.ಜಿಲ್ಲೆ
ಪೋಟೋ 3 :ಕೊಡಿಗೇಹಳ್ಳಿ ಗ್ರಾಮದಲ್ಲಿ ಕ್ವಿನ್ ಸಿಟಿ ಯೋಜನೆಯಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಹಿರಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್ ರೈತರ ಸಮಸ್ಯೆಗಳನ್ನು ಆಲಿಸಿದರು.