ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಯತಿಕುಲ ತಿಲಕ, ಕಲಿಯುಗದ ಕಲ್ಪತರು, ಕಾಮದೇನು ಶ್ರೀರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ಬೃಂದಾವನಸ್ಥರಾಗಿರುವ ಸುಕ್ಷೇತ್ರ ಮಂತ್ರಾಲಯದಲ್ಲಿ ಪ್ರಕೃತಿಗೆ ಹೊಸ ಜೀವಕೊಡುವ ಕೆಲಸವು ಕಾರ್ಯರೂಪತಾಳಿದೆ.
ರಾಯರ ಸನ್ನಿಧಾನದಲ್ಲಿ ಬೃಹತ್ ಮಾನವ ನಿರ್ಮಿತ ಸರೋವರ ನಿರ್ಮಿಸುವುದರ ಮುಖಾಂತರ ಜಲ ಸಂರಕ್ಷಣೆ, ವನ ಸಂವರ್ಧನೆ ಹಾಗೂ ಜೀವವೈವಿಧ್ಯ ರಕ್ಷಣೆಯ ಆಶಯದೊಂದಿಗೆ ರೂಪಿಸಲಾಗಿರುವ ರಾಘವ ಸರೋವರ ಯೋಜನೆ ಅನುಷ್ಠಾನಕ್ಕೆ ಸಿದ್ಧಗೊಂಡಿದೆ.ಬೆಂಗಳೂರಿನ ರಾಘವ ಸರೋವರ ಪ್ರತಿಷ್ಠಾನದಿಂದ ಮಂತ್ರಾಲಯದಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದ್ದು, ಬೃಹತ್ ಮಾನವ ನಿರ್ಮಿತ ಸರೋವರ, ದಟ್ಟ ಹಸಿರು ಅರಣ್ಯ, ವೈವಿಧ್ಯಮಯ ಸಸ್ಯಸಂಪತ್ತು, ಜೀವಸಂಕುಲಕ್ಕೆ ಆಶ್ರಯ, ಜೀವವೈವಿಧ್ಯ ಸಂರಕ್ಷಣೆ, ಪ್ರಕೃತಿ ಸಂರಕ್ಷಣೆಯ ಜತೆಗೆ ಜಲಸಂಪನ್ಮೂಲಗಳ ಅಭಿವೃದ್ಧಿಪಡಿಸುವ ಅಂಶಗಳು ಯೋಜನೆಯಲ್ಲಿ ಆದ್ಯತೆ ನೀಡಲಾಗಿದ್ದು, ಅಷ್ಟೇ ಅಲ್ಲದೇ ಪರಿಸರದ ಸಮತೋಲನ ಕಾಪಾಡುವ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಡುವ ಉದ್ದೇಶವನ್ನು ಯೋಜನೆ ಹೊಂದಿದೆ.
ನೀರು, ನೆಲ ಹಾಗೂ ಪ್ರಕೃತಿಯ ಸಂರಕ್ಷಣೆಯ ಮೂಲಕ ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ರೂಪಿಸುವ ಸಂಕಲ್ಪದೊಂದಿಗೆ ರಾಘವ ಸರೋವರ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯು ಪರಿಸರ ಪ್ರೇಮಿಗಳು ಹಾಗೂ ಪ್ರಕೃತಿ ಸಂರಕ್ಷಣೆಯ ಆಸಕ್ತರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಪರಿಸರ ಸಂರಕ್ಷಣೆ, ಸ್ವಚ್ಛತೆ,ಭಕ್ತರಿಗೆ ಉತ್ತಮ ಸವಲತ್ತುಗಳನ್ನು ಕಲ್ಪಿಸಿಕೊಡುವ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಅದರಲ್ಲಿಯೂ ಪ್ರಸ್ತುತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸುಕ್ಷೇತ್ರ ಮಂತ್ರಾಲಯದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮುಖಾಂತರ ರಾಯರ ನೆಲೆಯನ್ನು ಭೂಲೋಕದ ಸ್ವರ್ಗ, ಭಕ್ತಿಯ ವಿಶ್ವವನ್ನಾಗಿಸಲು ಹೊರಟಿರುವ ಸಮಯದಲ್ಲಿ ಶ್ರೀಗುರುರಾಯರ ಕೃಪಾಶೀರ್ವಾದ, ಶ್ರೀಗಳ ದೃಢ ಸಂಕಲ್ಪ ಮತ್ತು ರಾಯರ ಸರೋವರ ಪ್ರತಿಷ್ಠಾನದಿಂದ ಜನ್ಮತಾಳಿರುವ ಈ ಬೃಹತ್ ಮಾವನ ನಿರ್ಮಿಸಿ ರಾಯರ ಸರೋವರ ಯೋಜನೆಯು ಸುಕ್ಷೇತ್ರಕ್ಕೆ ಹೊಸ ಮೈಲುಗಲ್ಲಾಗಲಿದೆ.
*ನಾಳೆ ಭೂಮಿ ಪೂಜೆ: ಮಂತ್ರಾಲಯದ ರಾಘವ ಸರೋವರ ಯೋಜನಾ ಪ್ರದೇಶ, ಬೃಹತ್ ಶ್ರೀರಾಮ ಪ್ರತಿಮೆಯ ಆವರಣದಲ್ಲಿ ನ.4 ರಂದು ಬೆಳಗ್ಗೆ 9 ಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ದಿವ್ಯ ಸಾನಿಧ್ಯವನ್ನು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳ ವಹಿಸುವರು.ಸಂಸದ ಡಾ.ಸಿ.ಎಸ್. ಮಂಜುನಾಥ್, ರಾಷ್ಟ್ರೀಯ ಲೋಕಕಲಾ ಪರಿಷತ್ ಅಧ್ಯಕ್ಷ, ಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಡಾ.ಮದನ ಪಟೇಲ್, ಡಿ.ಲಿಟ್, ಬೆಂಗಳೂರಿನ ಪೋರ್ಟಿನ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತಚಿಕಿತ್ಸೆ ವಿಭಾಗದ ಪ್ರಧಾನ ನಿರ್ದೇಶಕ ಪ್ರೊ.ಡಾ.ಸಿ.ರಾಮಚಂದ್ರ, ಶ್ರೀರಾಘವೇಂದ್ರ ಚಿತ್ರವಾಣಿ ಚಲನಚಿತ್ರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್ಒ) ಸುಧೀಂದ್ರ ವೆಂಕಟೇಶ್, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ (ಸ್ನಾತಕೋತ್ತರ ಅಧ್ಯಯನ) ಮಾಜಿ ಡೀನ್ ಡಾ.ಎಂ.ಭೀಮಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ರಾಘವ ಸರೋವರ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿಗಳಾದ ಡಿ.ಎಸ್.ಧನಂಜಯ ಗೌಡ, ಸ್ನೇಹಲ್ ರೇವಣ್ಕರ್ ಅವರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಪರಿಸರಾಸಕ್ತರು ಹಾಗೂ ಸಾರ್ವಜನಿಕರು, ರಾಯರ ಭಕ್ತರು ಭಾಗವಹಿಸುವರು.