ದಾಬಸ್‍ಪೇಟೆ: ಸೋಂಪುರ ಹೋಬಳಿಯ ಅವ್ವೇರಹಳ್ಳಿ ಗ್ರಾಮದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಎಂ.ಬಿ. ಮೆಟಲ್ (ಪ್ಲಾಟ್ ನಂ.220, 221) ಹಾಗೂ ಆಂಜನೇಯ ಬಯೋಎನರ್ಜಿ (ಪ್ಲಾಟ್ ನಂ.208) ಕಂಪನಿಗಳಿಂದ ಹೊರಬರುವ ವಾಯು ಮತ್ತು ಜಲಮಾಲಿನ್ಯದಿಂದ ಗ್ರಾಮಸ್ಥರು ವಾಸಿಸುವುದು ಕಷ್ಟವಾಗಿದೆ ಎಂದು ಅವ್ವೇರಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ ಮುಖಂಡ ಸೂರ್ಯ ಕುಮಾರ್ ಪ್ರತಿಕ್ರಿಯಿಸಿ, ಕೈಗಾರಿಕೆಗಳಿಂದ ಹೊರಬರುತ್ತಿರುವ ಹೊಗೆ, ಧೂಳು ಹಾಗೂ ದುರ್ವಾಸನೆಯಿಂದ ಸುತ್ತಮುತ್ತಲ ನಿವಾಸಿಗಳಿಗೆ ಕೆಮ್ಮು, ಕಣ್ಣುರಿ, ಉಸಿರಾಟ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಸಂಸ್ಕರಿಸದೆ ಹೊರಬಿಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದರು.

ಗ್ರಾಮಸ್ಥ ನಾರಾಯಣಪ್ಪ ಮಾತನಾಡಿ, ಬರಗೇನಹಳ್ಳಿ, ಹೊನ್ನೇನಹಳ್ಳಿ, ಬಿಲ್ಲನಕೋಟೆ, ಮಾಚನಹಳ್ಳಿ, ಗೊಟ್ಟಿಗೆರೆ ಗ್ರಾಮಗಳಿಗೆ ದಿನನಿತ್ಯ ವಿಷಾನಿಲ ಗ್ರಾಮಗಳಿಗೆ ಸೇರುತ್ತಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ವಾಸಿಸುವುದು ದುಸ್ತರ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಭೇಟಿ ನೀಡಿ ಪರಿಶೀಲಿಸಿ, ಈ ಸಮಸ್ಯೆ ಬಗ್ಗೆ ಈಗಾಗಲೇ ಗ್ರಾಮಸ್ಥರು ಶಾಸಕ ಶ್ರೀನಿವಾಸ್ ಹಾಗೂ ನಮ್ಮ ಕಚೇರಿಗೆ ಅರ್ಜಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾನೇ ಖುದ್ದು ಪರಿಶೀಲಿಸಲು ಬಂದಿದ್ದೇನೆ. ನಮ್ಮ ಕಚೇರಿಯಿಂದ ಪರಿಸರ ಇಲಾಖೆ, ಕೆಐಎಡಿಬಿ ಹಾಗೂ ಜಿಲ್ಲಾಧಿಕಾರಿಗಳಿಗೆ ವಾಸ್ತವ ಸ್ಥಿತಿಯ ಬಗ್ಗೆ ಪತ್ರ ಬರೆದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಸುಂದರ್ ರಾಜ್, ಗ್ರಾಮಲೆಕ್ಕಿಗ ಶ್ವೇತಾ, ಪೊಲೀಸ್ ಇನ್ಸ್ ಪೆಕ್ಟರ್ ಧರ್ಮೆಂದ್ರ, ಗ್ರಾಮಸ್ಥರಾದ ಹನುಮಂತರಾಜು, ದೇವರಾಜು, ಬಸವರಾಜು, ಅರುಣಕುಮಾರ, ಗೋಪಾಲ, ಮುನಿರಾಜು ಇತರರಿದ್ದರು.


ಪೋಟೋ 3 :

ಸೋಂಪುರ ಹೋಬಳಿಯ ಅವ್ವೇರಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಎಂ.ಬಿ. ಮೆಟಲ್ ಕಾರ್ಖಾನೆಗೆ ತಹಸೀಲ್ದಾರ್ ಮಲ್ಲೇಶ್ ಭೀರಪ್ಪ ಪೂಜಾರ್ ಭೇಟಿ ನೀಡಿ ಪರಿಶೀಲಿಸಿದರು.