ಕನ್ನಡಪ್ರಭವಾರ್ತೆ ತಿಪಟೂರು

ಕಲಿಯುವ ಮನಸ್ಸಿದ್ದವರಿಗೆ ಕಲಿಕೆಗೆ ಎಂದಿಗೂ ಅಂತ್ಯವಿಲ್ಲ. ಭವಿಷ್ಯದ ವ್ಯಾಪಾರೋದ್ಯಮಿಗಳಾಗಲಿರುವ ಎಂಬಿಎ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಹಾಗೂ ಸಾಧನೆ ಕಠಿಣ ಪರಿಶ್ರಮ ಅತ್ಯಂತ ಪ್ರಮುಖವಾದ ಕೌಶಲ್ಯವಾಗಿದೆ ಎಂದು ವಿಸ್ಮಯ ಸೆಂಟರ್ ಫಾರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪೂರ್ಣಿಮಾ ತಿಳಿಸಿದರು.

ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ೨೦೨೬-೨೦೨೮ ನೂತನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಫ್ರೆಷರ್ಸ್‌ ಡೇ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮಾನವನ ಮೆದುಳಿಗೆ ಅಪಾರ ಸಾಮರ್ಥ್ಯವಿದ್ದು. ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಮಾನ ಸಾಮರ್ಥ್ಯ ಹೊಂದಿದ್ದಾರೆ. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದನ್ನು ಕಲಿಯಬೇಕು. ನಿಮ್ಮ ಆಲೋಚನಾ ಶಕ್ತಿ ಸೀಮಿತಗೊಳಿಸದೆ ಬೆಳೆಯಲು ಅವಕಾಶ ಕೊಡಿ ಹಾಗೂ ನೀವು ಏನಾಗಬೇಕೆಂದು ಬಯಸುತ್ತೀರೊ ಅದನ್ನು ಸಾಕಾರಗೊಳಿಸಲು ಪ್ರಾಮಾಣಿಕ ಮತ್ತು ದಿಟ್ಟ ಹೆಜ್ಜೆ ಇಡಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಪ್ರಾಂಶುಪಾಲರಾದ ಡಾ. ಎಚ್.ಸಿ. ಸತೀಶ್‌ಕುಮಾರ್ ಕೇವಲ ಪದವಿ ಪ್ರಮಾಣ ಪತ್ರ ಒಬ್ಬ ವ್ಯಕ್ತಿಯನ್ನು ಯಶಸ್ವಿಯನ್ನಾಗಿ ಮಾಡುವುದಿಲ್ಲ. ಉದ್ಯಮ ರಂಗಕ್ಕೆ ಅಗತ್ಯ ಪ್ರಾಯೋಗಿಕ ಜ್ಞಾನ ಮೈಗೂಡಿಸಿಕೊಂಡು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಎಂಬಿಎ ವಿಭಾಗವು ಕೆಐಟಿ ಸಂಸ್ಥೆ ಅತ್ಯಂತ ಶಿಸ್ತಿನ ವಿಭಾಗವಾಗಿದೆ ಎಂದು ಶ್ಲಾಘಿಸಿದರು.ವಿಭಾಗದ ಸಾಧನೆ ಹಂಚಿಕೊಂಡ ಐಐಸಿ ವಿಭಾಗದ ಮುಖ್ಯಸ್ಥರಾದ ಡಾ. ಮಿಟ್ಟಾ ಶೇಖರ್ ಗೌಡರ ಅವರು ಹಿಂದಿನ ಸಾಲಿನ ವಿದ್ಯಾರ್ಥಿಗಳು ಶೇಕಡ ೯೮ ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಹಾಗೂ ವಿವಿಧ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದಿದ್ದಾರೆ. ಎನ್.ಪಿ.ಟಿ.ಇ.ಎಲ್. ಕೋರ್ಸುಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕರನ್ನು ಶ್ಲಾಘಿಸುತ್ತ ಹಂಸಲೇಖ ಎಸ್. ಒಂದೇ ಕ್ಷೇತ್ರದಲ್ಲಿ ಅನೇಕ ಕೋರ್ಸುಗಳನ್ನು ಉತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿ ಪ್ರತಿಷ್ಠಿತ ಎನ್.ಪಿ.ಟಿ.ಇ.ಎಲ್. ಡಿಸಿಪ್ಲೀನ್ ಸ್ಟಾರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ೩ ಚಿನ್ನದ ಪದಕ, ೩ ಬೆಳ್ಳಿ ಪದಕ ಹಾಗೂ ೧ ಟಾಪರ್ ಪದಕ ಪಡೆದಿದ್ದಾರೆ. ಕೃತಿಕಾ ಎಸ್. ಕುಮಾರ್ ೩ ಚಿನ್ನದ ಪದಕ, ೧ ಬೆಳ್ಳಿ ಪದಕ, ೧ ಎಲೈಟ್ ಪ್ರಮಾಣ ಪತ್ರ ಹಾಗೂ ೩ ಟಾಪರ್ ಪದಕ ಪಡೆದಿದ್ದಾರೆ. ಡಾ. ನವೀನ್ ಕುಮಾರ್ ಟಿ.ಎಸ್. ಮತ್ತು ರಚನಾ ಎಸ್. ಎನ್.ಪಿ.ಟಿ.ಇ.ಎಲ್. ಕೋರ್ಸನಲ್ಲಿ ಎಲೈಟ್ ಪ್ರಮಾಣ ಪತ್ರ ಪಡೆದಿದ್ದಾರೆ. ಡಾ. ಸುಜಾತ ಎನ್. ಶೀರಿ ೧ ಎನ್.ಪಿ.ಟಿ.ಇ.ಎಲ್. ಕೋರ್ಸ್ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ದೀಪ್ತಿ ಅಮಿತ್ ಅವರು ನೂತನ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ನಿರ್ವಹಣಾ ಶಿಕ್ಷಣ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.


ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಎಂ.ಬಿ.ಎ. ನ್ಯೂಸ್ ಲೆಟರ್ ಅನ್ನು ಅನಾವರಣಗೊಳಿಸಿದರು. ರಚನಾ ಎಸ್. ನ್ಯೂಸ್ ಲೆಟರ್‌ನ ಪ್ರಾಮುಖ್ಯತೆ ವಿವರಿಸಿದರು.

ಕಾರ್ಯಕ್ರಮವು ಡಾ. ಸುಜಾತ ಎನ್. ಶೀರಿ ಅವರ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಡಾ. ನವೀನ್ ಕುಮಾರ್ ಟಿ.ಎಸ್. ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ಹಂಸಲೇಖ ಎಸ್. ಕಾರ್ಯಕ್ರಮ ನಿರೂಪಿಸಿದರು ಮತ್ತು ಕೃತಿಕಾ ಎಸ್. ಕುಮಾರ್ ವಂದನಾರ್ಪಣೆ ಸಲ್ಲಿಸಿದರು.