ಈ ಸಂಬಂಧಿಸಿದಂತೆ ತಹಸೀಲ್ದಾರರಿಗೆ ದೂರು ಸಲ್ಲಿಸಿದ್ದು, ಬಾಲಚಂದ್ರ ಚಿತ್ರಮಂದಿರದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟಿಸ್ನಲ್ಲಿ, ಜಿಲ್ಲಾಧಿಕಾರಿಗಳ ನಿರ್ದೇಶನಗಳನ್ನು ಪಾಲಿಸದೆ ತೆಲುಗು ಚಿತ್ರ ಪ್ರದರ್ಶಿಸಿರುವ ಕುರಿತು 24 ಗಂಟೆಗಳೊಳಗೆ ಖುದ್ದಾಗಿ ಹಾಜರಾಗಿ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಮರ್ಪಕ ಉತ್ತರ ಸಲ್ಲಿಸದಿದ್ದಲ್ಲಿ ಲಭ್ಯ ದಾಖಲೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕನ್ನಡ ರಾಜ್ಯೋತ್ಸವದಂದು ನಗರದ ಬಾಲಚಂದ್ರ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಕ್ಕೆ ಸೀಮಿತ ಅವಕಾಶ ನೀಡಿ, ನಂತರದ ಪ್ರದರ್ಶನಗಳಲ್ಲಿ ತೆಲುಗು ಚಲನಚಿತ್ರವನ್ನು ಪ್ರದರ್ಶಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಚಿತ್ರಮಂದಿರದ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಅಧ್ಯಕ್ಷ ಕಣಿಂಬೆಲೆ ಚಿನ್ನಪ್ಪ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬಾಲಚಂದ್ರ ಚಿತ್ರಮಂದಿರದಲ್ಲಿ ಬೆಳಗ್ಗಿನ ಪ್ರದರ್ಶನಕ್ಕೆ ಮಾತ್ರ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಕನ್ನಡ ಚಿತ್ರವನ್ನು ನಾಮ್ಕೇವಾಸ್ತೆ ಪ್ರದರ್ಶಿಸಿ, ನಂತರದ ಪ್ರದರ್ಶನಗಳಲ್ಲಿ ತೆಲುಗು ನಟ ವಿಕ್ಟರಿ ವೆಂಕಟೇಶ್ ಅಭಿನಯದ ಆದರ್ಶ ಕುಟುಂಬಂ ಚಿತ್ರವನ್ನು ಪ್ರದರ್ಶಿಸಲಾಗಿದೆ, ಇದು ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಆಕ್ಷೇಪಿಸಿದರು.
ಈ ಸಂಬಂಧಿಸಿದಂತೆ ತಹಸೀಲ್ದಾರರಿಗೆ ದೂರು ಸಲ್ಲಿಸಿದ್ದು, ಬಾಲಚಂದ್ರ ಚಿತ್ರಮಂದಿರದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟಿಸ್ನಲ್ಲಿ, ಜಿಲ್ಲಾಧಿಕಾರಿಗಳ ನಿರ್ದೇಶನಗಳನ್ನು ಪಾಲಿಸದೆ ತೆಲುಗು ಚಿತ್ರ ಪ್ರದರ್ಶಿಸಿರುವ ಕುರಿತು 24 ಗಂಟೆಗಳೊಳಗೆ ಖುದ್ದಾಗಿ ಹಾಜರಾಗಿ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಮರ್ಪಕ ಉತ್ತರ ಸಲ್ಲಿಸದಿದ್ದಲ್ಲಿ ಲಭ್ಯ ದಾಖಲೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.ತಾಲೂಕು ಅಧ್ಯಕ್ಷ ಕಣಿಂಬೆಲೆ ಚಿನ್ನಪ್ಪ, ಉಪಾಧ್ಯಕ್ಷರಾದ ಜೆ.ಎಂ.ಡಿ ಮುನಿಸ್ವಾಮಿ, ಟಿ.ಎಂ. ನಾಗರಾಜ, ವಿ. ರಾಮ್ ಪ್ರಸಾದ್, ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಜಿ. ನಾಗರತ್ನಮ್ಮ , ಉಪಾಧ್ಯಕ್ಷೆ, ಕಲ್ಪನಾ, ಶಾರದಮ್ಮ, ಎ.ವಿ. ಮಂಜುಳಾ, ಪ್ರಧಾನ ಕಾರ್ಯದರ್ಶಿ ಗಾಯತ್ರಿ , ಚಾಂದ್ ಪಾಷಾ ಇತರರು ಇದ್ದರು.