ಹುಬ್ಬಳ್ಳಿ:

ಬದಲಾದ ಕಾಲಮಾನ, ಪರಿಸ್ಥಿತಿಯ ಅನುಗುಣವಾಗಿ ಹೊಸ ಹಸಿರು ಕ್ರಾಂತಿಯ ಅವಶ್ಯಕತೆ ಅನಿವಾರ್ಯವಾಗಿದೆ. ಅದಕ್ಕೆ ತಕ್ಕಂತೆ ಕೃಷಿ ವಿಜ್ಞಾನಿಗಳು ಹೊಸ ಆವಿಷ್ಕಾರದ ದಿಕ್ಕಿನಲ್ಲಿ ಕೃಷಿ ಕ್ಷೇತ್ರ ಕೊಂಡೊಯ್ಯಬೇಕಿದೆ ಎಂದು ಕರ್ನಾಟಕ ಕೃಷಿ ಉತ್ಪನ್ನಗಳ ಬೆಲೆ ಆಯೋಗದ ಚೇರ್‌ಮನ್ ಡಾ. ಅಶೋಕ ದಳವಾಯಿ ಹೇಳಿದರು.

ಸೋಮವಾರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಇಲ್ಲಿನ ಎಪಿಎಂಸಿ ಯಾರ್ಡ್‌ನ ಹುಬ್ಬಳ್ಳಿ-ಧಾರವಾಡ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ "ಇನ್‌ಕಾಮೆಕ್ಸ್-2026 " ಕಾರ್ಯಕ್ರಮದಲ್ಲಿ ಅಗ್ರಿಕಲ್ಚರಲ್‌ ಕಾನ್‌ಕ್ಲೇವ್‌ನಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ರೈತರಿಗೆ ಹಸಿರು ಕ್ರಾಂತಿ ಜತೆಗೆ ಆರ್ಥಿಕ ಕ್ರಾಂತಿಯ ರೂಪ ಕೊಡುವ ಕಾರ್ಯ ನಡೆಯಬೇಕಿದೆ. ಅವರನ್ನು ಆರ್ಥಿಕವಾಗಿ ಸಬಲ ಮಾಡುವತ್ತ ದಿಟ್ಟ ಹೆಜ್ಜೆಯನ್ನಿಟುವ ಕಾರ್ಯವಾಗಬೇಕಿದೆ. ಕೃಷಿ ಹೊಸ ಆದಾಯ ಮತ್ತು ಉದ್ಯೋಗ ಸೃಷ್ಟಿಸುವ ರಂಗ ಆಗಬೇಕಿದೆ. ಇದಕ್ಕಾಗಿ ಹೊಸ ವಿಚಾರ ಬೇಕು. ಆಹಾರ ಸಂಸ್ಕರಣೆ ಬದಲಾಗಿ ಕೃಷಿ ಸಂಸ್ಕರಣೆ ಆಗಬೇಕಿದೆ ಎಂದರು.

ಕೃಷಿ ರಂಗ ಬೆಳವಣಿಗೆ ಕಂಡರೆ ಮಾತ್ರ ದೇಶದ 148 ಕೋಟಿ ಜನರಿಗೆ ಆಹಾರ ಉತ್ಪಾದನೆ ಸಾಧ್ಯ. ಸಾಕಷ್ಟು ಆಹಾರ ಭದ್ರತೆ ಇದ್ದರೂ ನಮ್ಮ ಪರಿಸ್ಥಿತಿ ಆರೋಗ್ಯಕರವಾಗಿಲ್ಲ. ಜನ ಇಂದಿಗೂ ಹಸಿವಿನಿಂದ ಬಳಲುತ್ತಿರುವುದೇ ಇದಕ್ಕೆಲ್ಲ ಸಾಕ್ಷಿ ಎಂದು ಕಳವಳ ವ್ಯಕ್ತಪಡಿಸಿದರು.


ಕಳೆದ 25 ವರ್ಷಗಳಲ್ಲಿ ಜನಸಂಖ್ಯೆ ಬೃಹದಾಕಾರವಾಗಿ ಬೆಳೆದಿದೆ. ಮುಂದಿನ 25 ವರ್ಷಗಳಲ್ಲಿ 760 ಕೋಟಿ ವಿಶ್ವದ ಜನಸಂಖ್ಯೆ ಆಗಲಿದ್ದು, ಆಹಾರ ಭದ್ರತೆ ಒದಗಿಸುವುದು ಸವಾಲಾಗಲಿದೆ. ಪ್ರತಿ ಹೆಕ್ಟೇರ್ ಇಳುವರಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಅದನ್ನು ಹೇಗೆ ಹೆಚ್ಚಿಸಬೇಕೆಂಬ ಚಿಂತನೆ ನಡೆಯುತ್ತಿಲ್ಲ. ವಿಜ್ಞಾನಿಗಳಿಂದ ಉತ್ಪಾದನೆ ಹೆಚ್ಚಿಸಲು ಹೇಗೆ ಸಹಾಯ ಪಡೆದುಕೊಳ್ಳಬೇಕು ಎಂಬುದನ್ನು ಯೋಚನೆ ಮಾಡುವವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿ, ಆಹಾರ ಉತ್ಪಾದನೆಗೆ ಬೇಕಾದಷ್ಟು ಸಂಪನ್ಮೂಲ ಇಟ್ಟುಕೊಂಡು ಉಳಿದಿದ್ದನ್ನು ಔದ್ಯೋಗಿಕ ರಂಗಕ್ಕೆ ಬಳಸಬೇಕು. ಕೃಷಿ ವಿಜ್ಞಾನಿಗಳು ಪ್ರೊಸೆಸಿಂಗ್ ತಂತ್ರಜ್ಞಾನ ದತ್ತ ಗಮನ ಹರಿಸಬೇಕು. ಆಹಾರ ಮತ್ತು ಆಹಾರೇತರ ಸಂಸ್ಕರಣೆ ವಿಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಆಗಬೇಕಿದೆ ಎಂದರು.

ಕೆನ್‌ ಅಗ್ರಿಟೆಕ್‌ ಪ್ರೈ.ಲಿ. ನ ವಿವೇಕ್ ನಾಯಕ, ಧಾರವಾಡ ಯುಎಎಸ್‌ ಕುಲಪತಿ ಡಾ. ಪಿ.ಎಲ್‌. ಪಾಟೀಲ ಸೇರಿದಂತೆ ಹಲವರು ಮಾತನಾಡಿದರು. ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ, ಇನ್ ಕಾಮೆಕ್ಸ್ ಚೇರ್‌ಮನ್ ಮಹಾದೇವ ಕರಮರಿ, ಗೌರವ ಕಾರ್ಯದರ್ಶಿ ಉದಯ ರೇವಣಕರ್, ಉಪಾಧ್ಯಕ್ಷ ಪ್ರವೀಣ ಅಗಡಿ, ಸಿದ್ಧೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ್, ಜಯಪ್ರಕಾಶ ಟೆಂಗಿನಕಾಯಿ, ಶಶಿಧರ ಶೆಟ್ಟರ, ಮಹೇಂದ್ರ ಲದ್ಧಡ, ವಸಂತ ಲದ್ವಾ, ಡಿ.ಡಿ. ಪಾಟೀಲ ಸೇರಿದಂತೆ ಹಲವರಿದ್ದರು.