ಸಾರಾಂಶ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ತರಬೇತಿ, ವ್ಯಕ್ತಿತ್ವ ವಿಕಸನ ಶಿಬಿರ
ಕನ್ನಡಪ್ರಭ ವಾರ್ತೆ, ಕಡೂರುಒಬ್ಬ ವ್ಯಕ್ತಿಯಲ್ಲಿರುವ ಸದ್ಗುಣಗಳು ಭವಿಷ್ಯದಲ್ಲಿ ಆ ವ್ಯಕ್ತಿಯ ನಾಯಕತ್ವ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣ ವಾಗುತ್ತವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ ಅಭಿಪ್ರಾಯಿಸಿದರು.
ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ ಆಯೋಜಿಸಿದ್ದ ಮೂಲ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ವಿದ್ಯಾರ್ಥಿಗಳು ಕಾಲೇಜು ಮಟ್ಟದಲ್ಲಿಯೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಆಗ ಮಾತ್ರ ಸಮಾಜ ಮುಖಿಯಾಗಿ ಬೆಳೆಯಲು ಸಾಧ್ಯವಿದೆ. ಈ ನಿಟ್ಟಿ ನಲ್ಲಿ ಕಾಲೇಜಿನ ರೋವರ್ಸ್ ಮತ್ತು ರೇಜಂರ್ಸ್ ಘಟಕದಿಂದ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಬಗ್ಗೆ ನಾಲ್ಕು ಜನ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.ಯಾವುದೇ ವ್ಯಕ್ತಿ ಸಮಾಜ ಮುಖಿಯಾಗಿ ಮಾಡಿದ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಅದರಲ್ಲಿಯೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತೆ ವ್ಯಕ್ತಿತ್ವ ಬೆಳೆಸಿಕೊಳ್ಳಲು ಭಾವನಾತ್ಮಕ, ಭೌತಿಕ ಹಾಗು ಮಾನಸಿಕವಾಗಿ ಸಿದ್ಧರಿರಬೇಕು. ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ತೋರಿಸಬೇಕು. ತಾವೆಲ್ಲಾ ಯುವಕರಾಗಿದ್ದು ಕಲಿಯುವ ವಯಸ್ಸು ನಿಮ್ಮದು ಉತ್ತಮ ವಿಷಯಗಳನ್ನು ಕಲಿತು ಸಮಾಜಕ್ಕೆ ಹೆಸರು ತಂದುಕೊಡಿ ಎಂದು ಶಿಬಿರಾರ್ಥಿಗಳಿಗೆ ರಾಜಣ್ಣ ಕಿವಿಮಾತು ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಅಧ್ಯಕ್ಷ ಶರತ್ ಕೃಷ್ಣಮೂರ್ತಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ. ಸರ್ಕಾರಿ ಕಾಲೇಜಿನಲ್ಲಿ ಪಾಠ ಪ್ರವಚನಗಳಿಗೆ ಒತ್ತು ನೀಡುವಂತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವುದರಿಂದ ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ವಿಕಸನಗೊಳ್ಳಲು ಕಾಲೇಜು ಆಡಳಿತ ಹೆಚ್ಚಿನ ಅವಕಾಶ ನೀಡಿದೆ. ಅದಕ್ಕಾಗಿ ಅಭಿನಂದಿಸುತ್ತೇನೆ ಎಂದರು. ಸ್ಕೌಟ್ ಸಂಸ್ಥಾಪಕ ಬೇಡೆನ್ ಪೊವೆಲ್ ಹೇಳುವಂತೆ ಸ್ಕೌಟ್ ಯುವ ಸಾಮಾಜಿಕ ಚಳುವಳಿಯಾಗಿದೆ. ಇದು ಕ್ಯಾಂಪಿಂಗ್, ವುಡ್ಕ್ರಾ ಫ್ಟ್, ಅಕ್ವಾಟಿಕ್ಸ್, ಹೈಕಿಂಗ್, ಬ್ಯಾಕ್ ಪ್ಯಾಕಿಂಗ್ ಮತ್ತು ಕ್ರೀಡೆಗಳು ಸೇರಿದಂತೆ ಪ್ರಾಯೋಗಿಕ ಹೊರಾಂಗಣ ಚಟುವಟಿಕೆಗಳ ಮೇಲೆ ಒತ್ತು ನೀಡುವ ಶಿಕ್ಷಣದ ಕಾರ್ಯಕ್ರಮ. ಅದರಲ್ಲೂ ಹದಿಹರೆಯದ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಅಂಡ್ ಗೈಡ್ ರಚಿಸಲಾಗಿದೆ. ಈ ಸಂಘಟನೆ ಶಿಸ್ತು ಬದ್ಧವಾಗಿದ್ದು ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಯುವಕರು ಸೇರ್ಪಡೆಗೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿ ಎಂದರು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಶಿವಮೊಗ್ಗ ಸ್ಥಳೀಯ ಕಾರ್ಯದರ್ಶಿ ರಾಜೇಶ್ ಡಿ.ಅವಲಕ್ಕಿ, ನಿವೃತ್ತ ಪ್ರಾಧ್ಯಾಪಕ ಎಚ್.ಎಸ್. ಜಗದೀಶಪ್ಪ, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎನ್.ಎಸ್. ಪಂಕಜಾ, ಕಾಲೇಜಿನ ರೋವರ್ಸ್ ಸ್ಕೌಟ್ ಲೀಡರ್ ಜಿ. ತಿಮ್ಮರಾಜು ಮತ್ತು ಎಚ್.ಆರ್.ಜ್ಯೋತಿ, ರಾಘವೇಂದ್ರ ಕುಮಾರ್, ಪ್ರಸನ್ನ ಮತ್ತು ಸ್ಕೌಟ್ ಗೈಡ್ಸ್ ತರಬೇತಿ ಶಿಬಿರಾರ್ಥಿಗಳು ಇದ್ದರು. 19ಕೆಕೆಡಿಯು1. ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ನ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರವನ್ನು ಶರತ್ ಕೃಷ್ಣಮೂರ್ತಿ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಕೆ.ಎ.ರಾಜಣ್ಣ, ರಾಜೇಶ್ ಅವಲಕ್ಕಿ, ಜಗದೀಶ್, ಜ್ಯೋತಿ, ತಿಮ್ಮರಾಜ್ ಇದ್ದರು.