ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ಮನೆಗೂ ನಳ್ಳಿ ನೀರು ಪೂರೈಸುವ ಜಲ್ ಜೀವನ ಮಿಷನ್ ಕಾಮಗಾರಿ ಶೇ. 92 ಪೂರ್ಣಗೊಂಡಿದೆ. ಬಾಕಿ ಉಳಿದ ಕಾಮಗಾರಿಗಳನ್ನು ಆದ್ಯತೆ ಮೇಲೆ ತ್ವರಿತವಾಗಿ ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರಿದೆ ದಂಡ ವಿಧಿಸಬೇಕರು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಮಣಿಪಾಲದ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 2,47,000 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕವನ್ನು ಕಲ್ಪಿಸಲು ಜಲ ಜೀವನ ಅಡಿಯಲ್ಲಿ ಗುರಿ ಹೊಂದಲಾಗಿದೆ. ಈ ವರೆಗೆ 2,14,000 ಮನೆಗಳಿಗೆ ನಳ ಸೌಲಭ್ಯ ಒದಗಿಸಲಾಗಿದೆ. ಈ ಯೋಜನೆಯಡಿ 525 ಕಾಮಗಾರಿಗಳನ್ನು 687.66 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ 484 ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಉಳಿದ 41 ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ 501.40 ಕೋಟಿ ರು. ವಹಿಸಲಾಗಿದೆ ಎಂದರು.
ಈಗಾಗಲೇ ಕಳೆದ ಒಂದು ವರ್ಷದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಕೈಗೊಳ್ಳಲು ಯಾವುದೇ ಜಾಗದ ಸಮಸ್ಯೆಗಳು ಇಲ್ಲ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ತಾಂತ್ರಿಕ ಕಾರಣಗಳನ್ನು ಹೇಳುತ್ತಾರೆ. ಇದು ಸರಿಯಲ್ಲ. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರಿಗೆ ದಂಡ ಹಾಕಬೇಕು ಎಂದರು.ಪೌರಾಯುಕ್ತ ಡಾ. ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಉದಯ್ ಕುಮಾರ್, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾ ಅಧಿಕಾರಿ ರವೀಂದ್ರ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ, ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ದಿನಕರ ಶೆಟ್ಟಿ ಮತ್ತಿತರರಿದ್ದರು.