ಮಾಗಡಿ: ನಮ್ಮ ಪೂರ್ವಜರು ಆರಾಧಿಸಿಕೊಂಡು ಬಂದ ಮುಳಕಟ್ಟಮ್ಮ ದೇವಿಯ ಸನ್ನಿಧಿಗೆ ಬರುವುದು ನಮಗೆ ಕೇವಲ ಧಾರ್ಮಿಕ ಕಾರ್ಯವಲ್ಲ, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ತಾಲೂಕಿನ ಪ್ರಸಿದ್ಧ ದೇಗುಲ ಹಾಗೂ ಸಚಿವರ ಮನೆ ದೇವರಾದ ಶ್ರೀ ಮುಳಕಟ್ಟಮ್ಮದೇವಿ ಬ್ರಹ್ಮ ರಥೋತ್ಸವದಲ್ಲಿ ಏರ್ಪಡಿಸಿದ್ದ ರಸಸಂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗ ಇಲ್ಲಿಗೆ ಬರಲು ರಸ್ತೆಗಳಿರಲಿಲ್ಲ. ಕುದೂರು ರಸ್ತೆಯಲ್ಲಿ ಬಸ್ಸಿಳಿದು ಅಲ್ಲಿಂದ ಎತ್ತಿನ ಗಾಡಿಯಲ್ಲಿ ಈ ಕ್ಷೇತ್ರಕ್ಕೆ ಬರುತ್ತಿದ್ದೆವು. ಅಂದಿನಿಂದ ಇಂದಿನವರೆಗೆ ಈ ಕ್ಷೇತ್ರ ಬೆಳೆದು ಬಂದಿರುವ ರೀತಿ ಬೆರಗು ಮೂಡಿಸುತ್ತದೆ. ಈ ತಾಯಿಯ ಶಕ್ತಿಯೇ ಭಕ್ತರನ್ನು ಇಲ್ಲಿಗೆ ಎಳೆತರುತ್ತದೆ ಎಂದರು.ದೇವಸ್ಥಾನಕ್ಕೆ ಬರುವುದು ಕೇವಲ ಒಂದು ಸಾಧನೆಯಾಗಬಾರದು. ಭಕ್ತಿ ಮತ್ತು ಭಾವನೆ ನಮ್ಮ ಅಂತರಾತ್ಮದಲ್ಲಿ ಇರಬೇಕು. ಯಾರು ನಿಷ್ಕಲ್ಮಶ ಭಕ್ತಿಯಿಂದ ತಾಯಿಯನ್ನು ಆರಾಧಿಸುತ್ತಾರೋ, ಅವರ ಕಷ್ಟಗಳನ್ನು ಆಕೆ ದೂರ ಮಾಡುತ್ತಾಳೆ ಎಂಬುದಕ್ಕೆ ನನ್ನ ಜೀವನದಲ್ಲೇ ಅನೇಕ ಉದಾಹರಣೆಗಳಿವೆ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುವುದು ಈ ದೇವಿಯ ಶಕ್ತಿಗೆ ಸಾಕ್ಷಿ ಎಂದು ಹೇಳಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಮುಳಕಟ್ಟಮ್ಮ ದೇವಿಗೆ ಬೆಳ್ಳಿ ಕವಚಧಾರಣೆ ಮಾಡಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಪುನೀತರಾದರು. ಗೃಹ ಸಚಿವರ ಪತ್ನಿ ಕನ್ನಿಕಾ ಪರಮೇಶ್ವರಿ ಅವರು ದೇವಿಯ ಕಳಶ ಹೊತ್ತು ಸಾಗುವ ಮೂಲಕ ಭಕ್ತಿ ಮೆರೆದರು. ಸಚಿವರು ಬಾಣ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಆಗಸದಲ್ಲಿ ಮೂಡಿದ ವಿವಿಧ ವರ್ಣರಂಜಿತ ಚಿತ್ತಾರಗಳು ನೋಡುಗರ ಗಮನ ಸೆಳೆದವು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೀಲು ಕುದುರೆ ಹಾಗೂ ಕರಡಿ ಮಜಲುಗಳ ಪ್ರದರ್ಶನ ಜಾತ್ರೆಗೆ ಸಾಂಪ್ರದಾಯಿಕ ಕಳೆಯನ್ನು ನೀಡಿತು.ರಸಸಂಜೆ ಮತ್ತು ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ಹವಾ:
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ರಸಮಂಜರಿ ಮತ್ತು ಹಾಸ್ಯ ಕಾರ್ಯಕ್ರಮಗಳು ಸಾರ್ವಜನಿಕರನ್ನು ರಂಜಿಸಿದವು. ವಿಶೇಷವಾಗಿ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ವೇದಿಕೆ ಏರುತ್ತಿದ್ದಂತೆ ಯುವಜನತೆಯ ಉತ್ಸಾಹ ಮುಗಿಲು ಮುಟ್ಟಿತ್ತು. ನೆಚ್ಚಿನ ನಟನ ಜೊತೆ ಸೆಲ್ಫಿ ಪಡೆಯಲು ಅಭಿಮಾನಿಗಳು ಮುಗಿಬಿದ್ದ ಕಾರಣ, ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್, ಲಕ್ಷ್ಮಿ ಮಂಜುನಾಥ್, ವಿಜಯಕುಮಾರ್, ಬಿ.ಎಸ್.ಕುಮಾರ್, ತುಮಕೂರು ಜಿಲ್ಲಾಧಿಕಾರಿ ಶುಭಾಕಲ್ಯಾಣ್, ರಾಮನಗರ ಎಸ್ಪಿ ಆರ್.ಶ್ರೀನಿವಾಸ್ ಗೌಡ, ಮಾಗಡಿ ಡಿವೈಎಸ್‌ಪಿ ಕೆ.ಎಂ.ಪ್ರವೀಣ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ದೇವಾಲಯದ ಪ್ರಧಾನ ಅರ್ಚಕರಾದ ಮಹೇಶ್, ಗಂಗಾಧರಯ್ಯ, ರಾಜು ಭಾಗವಹಿಸಿದ್ದರು.