ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಎಸ್ಸೆಸ್ಸೆಲ್ಸಿ ಪರೀಕ್ಷೆಯು ಮುಂದಿನ ಶಿಕ್ಷಣ ಹಾಗೂ ನಿಮ್ಮ ಭವಿಷ್ಯವನ್ನು ನಿರ್ಧರಿಸುವಂತಹ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಹೊಂದಿ, ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಸಾಧನೆಗೆ ಮುಂದಾಗಿ ಎಂದು ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್ ಹೇಳಿದರು.ಪಟ್ಟಣದ ಜೆಎಸ್ಎಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬಡತನ ಶಾಪವಲ್ಲ, ಅದು ಸಾಧನೆಯ ಹಾದಿ ಎಂದು ತಿಳಿಯಬೇಕು, ನಾನು ಶಿಕ್ಷಣದಿಂದ ವಂಚಿತನಾಗಿದ್ದೆ, ಆದ್ದರಿಂದ ಯಾವ ಮಕ್ಕಳು ಸಹ ಬಡತನದ ಕಾರಣದಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ನನ್ನ ದುಡಿಮೆಯ ಒಂದು ಭಾಗವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೀಸಲಿಟ್ಟು ನೆರವು ನೀಡುತ್ತಿದ್ದೇನೆ. ವಿದ್ಯಾರ್ಥಿಗಳು ಯಾವುದೇ ಅಡ್ಡಿ ಆತಂಕಗಳನ್ನು ಬಿಟ್ಟು ಮೇಲು-ಕೀಳು ಬಡತನ ಎಂಬ ಕೀಳರಿಮೆ ಭಾವನೆಯನ್ನು ಬಿಟ್ಟು ಏಕಾಗ್ರತೆಯಿಂದ ವ್ಯಾಸಂಗದಲ್ಲಿ ತೊಡಗಿ ಕೊಳ್ಳಬೇಕು ಎಂದರು.ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಲಾಯಿತು. ಹಾಗೂ ಕಳೆದ ವರ್ಷ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಜಿಎಸ್ಎಸ್ ಮಹಾವಿದ್ಯಾಪೀಠದ ವಿಷಯ ಪರಿವೀಕ್ಷಕರಾದ ಎಚ್.ಎಸ್. ನಾಗರಾಜು, ದಳವಾಯಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗೇಶ್ ನಾಯಕ, ಕೆ.ಎಂ. ಬಸವರಾಜು, ಶಾಲೆಯ ಮುಖ್ಯೋಪಾಧ್ಯಾಯರಾದ ಹಾಜಿರಾ ಬೇಗಂ, ಶಿಕ್ಷಕರಾದ ಗೌರವಾಂಬಿಕ, ಜಯಶೀಲ, ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.