ಸಾರಾಂಶ
ಇಮಾಮ್‌ಹುಸೇನ್ ಮರಣ ಪ್ರಮಾಣಪತ್ರ ಪಡೆದಿರುವುದು ಅವರ ಸಂಬಂಧಿಕರಿಗೆ ತಿಳಿದಿದೆ. ಹೀಗೆ ಓಣಿಯ ಜನರೊಂದಿಗೆ ಮಾತನಾಡುವಾಗ ಪುರಸಭೆಯಿಂದ ಪ್ರಮಾಣಪತ್ರ ಪಡೆದು ಬ್ಯಾಂಕ್ ಮತ್ತು ಫೈನಾನ್ಸ್‌ಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ನವಲಗುಂದ:
ಬ್ಯಾಂಕ್ ಹಾಗೂ ಫೈನಾನ್ಸ್‌ಗಳಲ್ಲಿ ಮಾಡಿದ ಸಾಲ ತೀರಿಸಲು ಆಗದೆ ವ್ಯಕ್ತಿಯೋರ್ವ ಸಂಬಂಧಿಕರ ಮೂಲಕ ಪುರಸಭೆಯಿಂದ ಮರಣ ಪ್ರಮಾಣ ಪತ್ರ ಪಡೆದು ಬ್ಯಾಂಕಿಗೆ ಸಲ್ಲಿಸಿದ್ದು, ಪುರಸಭೆ ಅಧಿಕಾರಿಗಳು ದಾಖಲೆ ಪರಿಶೀಲಿಸದೆ ಮರಣ ಪ್ರಮಾಣ ಪತ್ರ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.ಇತ್ತ ಪುರಸಭೆ ಮುಖ್ಯಾಧಿಕಾರಿ ಪ್ರಮಾಣಪತ್ರ ಪಡೆದ ವ್ಯಕ್ತಿ, ಅಧಿಕಾರಿಗಳು ಹಾಗೂ ಏಂಜೆಟರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಮುಂದಾಗಿದ್ದಾರೆ.
ಇಲ್ಲಿನ ರಾಮಲಿಂಗ ಓಣಿಯ ಇಮಾಮ್‌ಹುಸೇನ್ ಮುಕ್ತುಮಸಾಬ್ ಮುಲ್ಲಾನವರ ಈ ಕೃತ್ಯ ವೆಸಗಿದ ವ್ಯಕ್ತಿ. ಇವನ ಸಂಬಂಧಿ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಗ್ರಾಮದ ಮೌಲಾಸಾಬ್ ನಲವಡಿ ಆ. 21ರಂದು ಇಮಾಮ್‌ಹುಸೇನ್ ಮೃತನಾಗಿದ್ದಾನೆಂದು ನವಲಗುಂದ ಪುರಸಭೆಗೆ ಆ. 27ರಂದು ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಅಧಿಕಾರಿಗಳು ಅದನ್ನು ಪರಿಶೀಲಿಸಿ ಆ. 29ರಂದು ಪ್ರಮಾಣಪತ್ರ ನೀಡಿದ್ದಾರೆ. ಅದನ್ನೇ ಬ್ಯಾಂಕ್ ಹಾಗೂ ಫೈನಾನ್ಸ್‌ಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.ಅಧಿಕಾರಿಗೂ ಟೋಪಿ:
ಮೌಲಾಸಾಬ್ ನಲವಡಿ ಅರ್ಜಿ ಸಲ್ಲಿಸಿದ ಬಳಿಕ ನಾವು ಮೃತರ ಮನೆಗೆ ಹೋಗಿ ಪರಿಶೀಲಿಸಿದ್ದೇವೆ. ಅವರು ಇಮಾಮ್‌ಹುಸೇನ್ ಮುಕ್ತುಮಸಾಬ್ ಮುಲ್ಲಾನವರ ಮೃತನಾಗಿದ್ದಾನೆ ಎಂದು ಹೇಳಿದರು. ಹೀಗಾಗಿ ನಾವು ಪ್ರಮಾಣ ಪತ್ರ ನೀಡಿದ್ದೇವೆ. ಇದೀಗ ಆತ ಬದುಕಿದ್ದಾನೆ ಎಂದು ತಿಳಿದ ಬಳಿಕ ಆತನನನ್ನು ಕರೆಸಿ ದಾಖಲೆ ಮರಳಿ ಪಡೆಯಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಹೇಳಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯ:
ಪಟ್ಟಣದಲ್ಲಿ ಯಾವುದೇ ವ್ಯಕ್ತಿ ತೀರಿಕೊಂಡರೆ ಪುರಸಭೆಗೆ ಸ್ಥಾನಿಕ ಚೌಕಾಶಿ (ಪಂಚರ ಸಹಿ) ಮಾಡಿ ಆ ಓಣಿಯ/ವಾರ್ಡಿನ ಸದಸ್ಯರ ಹಾಗೂ ಆಶಾ ಕಾರ್ಯಕರ್ತೆಯರು, ಅಷ್ಟೇ ಅಲ್ಲದೇ ಹಿರಿಯರ ಸಹಿ ಪಡೆದು ಅವರೊಂದಿಗೆ ಪರಿಶೀಲಿಸಿ ಮೃತರ ಮನೆಗೆ ಭೇಟಿ ನೀಡಿ ಮರಣ ಪ್ರಮಾಣ ಪತ್ರದ ಅರ್ಜಿ ನೋಂದಣಿ ಮಾಡಲಾಗುತ್ತದೆ. ಆದರೆ ಇಲ್ಲಿನ ಅಧಿಕಾರಿಗಳ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಇದು ಯಾವುದನ್ನು ಮಾಡಿಲ್ಲ. ಈ ಕುರಿತು ಕೇಳಿದರೆ ಕೆಲಸದ ಒತ್ತಡದಲ್ಲಿ ಈ ಘಟನೆ ನಡೆದಿರಬಹುದು ಎಂದು ಸಬೂಬು ನೀಡಿದ್ದಾರೆ.ಬದುಕಿದ್ದು ಬಯಲಿಗೆ:
ಇಮಾಮ್‌ಹುಸೇನ್ ಮರಣ ಪ್ರಮಾಣಪತ್ರ ಪಡೆದಿರುವುದು ಅವರ ಸಂಬಂಧಿಕರಿಗೆ ತಿಳಿದಿದೆ. ಹೀಗೆ ಓಣಿಯ ಜನರೊಂದಿಗೆ ಮಾತನಾಡುವಾಗ ಅವರು ನಮ್ಮ ಇಮಾಮ್‌ಹುಸೇನ್ ಬ್ಯಾಂಕ್ ಹಾಗೂ ಫೈನಾನ್ಸ್‌ಗಳಲ್ಲಿ ಸಾಲ ಮಾಡಿದ್ದ, ಅದರಿಂದ ತಪ್ಪಿಸಿಕೊಳ್ಳಲು ಪುರಸಭೆಯಿಂದ ಪ್ರಮಾಣಪತ್ರ ಪಡೆದು ಬ್ಯಾಂಕ್ ಮತ್ತು ಫೈನಾನ್ಸ್‌ಗೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಇದು ಒಬ್ಬರಿಂದ ಒಬ್ಬರಿಗೆ ತಲುಪಿ ಕೊನೆಗೆ ಪುರಸಭೆ ಬಂದು ಮುಟ್ಟಿದೆ.ಡಿಸಿಗೆ ವರದಿ:
ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಪೂಜಾರ, ತಪ್ಪಿತಸ್ಥರ ವಿರುದ್ಧ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ್ದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಅವರ ಆದೇಶದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.ನಾನು ಮರಣ ಪ್ರಮಾಣಪತ್ರವನ್ನು ಬೇಕಂತಲೇ ತೆಗೆದುಕೊಂಡಿದ್ದೇನೆ. ತಿಳಿಯದೇ ತಪ್ಪು ಮಾಡಿದ್ದೇನೆ. ನನಗೆ ನನ್ನ ತಪ್ಪು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಇಮಾಮ್‌ಹುಸೇನ್ ಮುಲ್ಲಾನವರ ಮನವಿ ಮಾಡಿದ್ದಾರೆ.
ಈಗಾಗಲೇ ಇಮಾಮ್‌ಹುಸೇನ್ ವಿರುದ್ಧ ಕ್ರಮಕೈಗೊಳ್ಳಲು ಎಲ್ಲ ರೀತಿಯಿಂದ ಸಿದ್ಧತೆ ಮಾಡಿದ್ದೇವೆ. ಈ ಘಟನೆಯಲ್ಲಿ ಅಧಿಕಾರಿ, ಗುತ್ತಿಗೆ ಸಿಬ್ಬಂದಿಯ ಪಾತ್ರವಿದ್ದರೂ ಅವರ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಶರಣಪ್ಪ ಪೂಜಾರ ತಿಳಿಸಿದ್ದಾರೆ.ಮಾನವೀಯ ಆಧಾರವ ಮೇಲೆ ರುಜು:
ಇಮಾಮ್‌ಹುಸೇನ್ ಮೃತನಾಗಿದ್ದಾನೆ. ಆತನ ಮರಣ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ನೀವು ಅರ್ಜಿಗೆ ಸಹಿ ಮಾಡಿಕೊಡಿ ಎಂದು ಆತನ ಸಂಬಂಧಿಕರು ನನ್ನ ಭೇಟಿ ಮಾಡಿ ಮನವಿ ಮಾಡಿದರು. ಆಗ ನಾನು ಮಾನವೀಯ ಆಧಾರದ ಮೇಲೆ ಸಹಿ ಮಾಡಿದ್ದೇನೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮತ್ತೆ ಅದೇ ಜನರು ನನ್ನ ಬಳಿ ಬಂದು ಇಮಾಮ್‌ಹುಸೇನ್ ಬದುಕಿದ್ದಾನೆ ಎಂದು ಹೇಳಿದರು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಾಂತೇಶ ಭೋವಿ ಹೇಳಿದ್ದಾರೆ. ಆದರೆ, ಈ ಹಗರಣದಲ್ಲಿ ಮಹಾಂತೇಶ ಭೋವಿ ಪಾತ್ರ ದೊಡ್ಡದಿದೆ ಎನ್ನುವ ಮಾತುಗಳು ಪಟ್ಟಣದಲ್ಲಿ ಕೇಳಿಬರುತ್ತಿವೆ.