ಕಾಂಗ್ರೆಸ್‌ನಿಂದ ಇಂದು ಶಕ್ತಿ ಪ್ರದರ್ಶನ

| Published : Apr 16 2024, 01:01 AM IST

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಈಗಾಗಲೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರೂ ಏ. 16ರಂದು ಶಕ್ತಿ ಪ್ರದರ್ಶನದೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶ

ಸಚಿವ ಎಚ್.ಕೆ. ಪಾಟೀಲ್, ಮಾಜಿ ಸಚಿವ ಲಕ್ಷ್ಮಣ ಸವದಿ ಭಾಗಿ ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಈಗಾಗಲೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರೂ ಏ. 16ರಂದು ಶಕ್ತಿ ಪ್ರದರ್ಶನದೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.

ಇದಕ್ಕಾಗಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಅಪಾರ ಸಂಖ್ಯೆಯ ಕಾಂಗ್ರೆಸ್ ಬೆಂಬಲಿಗರು ಆಗಮಿಸಲಿದ್ದು, ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ, ಶಕ್ತಿ ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೊಪ್ಪಳ ನಗರದ ಶಿರಸಪ್ಪಯ್ಯನ ಮಠದಿಂದ ಬೆಳಗ್ಗೆ 9.30ಕ್ಕೆ ಮೆರವಣಿಗೆ ಪ್ರಾರಂಭವಾಗಲಿದೆ. ಇದಕ್ಕಾಗಿ ನೂರಾರ ವಾಹನಗಳಲ್ಲಿ ಜನರನ್ನು ಕರೆತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿರಸಪ್ಪಯ್ಯನ ಮಠದಿಂದ ಹೊರಡುವ ಮೆರವಣಿಗೆ ನಗರದ ಜವಾಹಾರ ರಸ್ತೆಯ ಮೂಲಕ ಸಾಗಿ ತಾಲೂಕು ಕ್ರೀಡಾಂಗಣ ಸೇರಲಿದೆ. ಅಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ.

ನಾಯಕರೇ ದಂಡೆ ಆಗಮನ:

ಬಹಿರಂಗ ಸಮಾವೇಶ ಮತ್ತು ಮೆರವಣಿಗೆಗೆ ಕಾಂಗ್ರೆಸ್ ನಾಯಕರ ದಂಡೆ ಆಗಮಿಸಲಿದೆ. ಸಚಿವರಾದ ಎಚ್.ಕೆ. ಪಾಟೀಲ್, ಜಮೀರ್ ಅಹ್ಮದ್, ಸತೀಶ ಜಾರಕಿಹೊಳಿ, ಮಾಜಿ ಸಚಿವ ಲಕ್ಷ್ಮಣ ಸವದಿ, ಎಚ್. ಆಂಜನೇಯ ಆಗಮಿಸಲಿದ್ದಾರೆ. ಸಮಾವೇಶಕ್ಕೂ ಮುನ್ನ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಮೆರವಣಿಗೆಯಲ್ಲಿ ಆಗಮಿಸಿ, ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಬಹಿರಂಗ ಸಮಾವೇಶ: ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ದೊಡ್ಡ ವೇದಿಕೆಯನ್ನೇ ಹಾಕಿದ್ದಾರೆ. ಹಾಗೆಯೇ ಸಹಸ್ರಾರು ಚೇರ್‌ಗಳನ್ನು ಸಹ ಹಾಕಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸೇರ್ಪಡೆ ಕಾರ್ಯಕ್ರಮ:

ಕಾಂಗ್ರೆಸ್‌ಗೆ ಜೆಡಿಎಸ್ ಮತ್ತು ಬಿಜೆಪಿ ತೊರೆದು ಅಪಾರ ಸಂಖ್ಯೆಯ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಸಂಸದ ಸಂಗಣ್ಣ ಕರಡಿ ಅವರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದು, ಬಹಿರಂಗ ಸಮಾವೇಶದಲ್ಲಿಯೂ ನೂರಾರು ಸಂಖ್ಯೆಯಲ್ಲಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ.