ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಗಡಿಭಾಗ ಇಂಡಿ ತಾಲೂಕಿನಲ್ಲಿ ಪ್ರತಿವರ್ಷ ರೈತರು, ಸಾರ್ವಜನಿಕರು ಅತಿವೃಷ್ಟಿ, ಅನಾವೃಷ್ಟಿಯಿಂದ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ನಾನು ಭೀಮಾನದಿ ದಂಡೆಯ ಗ್ರಾಮದವನೇ ಆಗಿದ್ದರಿಂದ ನದಿಪಾತ್ರದ ಜನರ ಸಮಸ್ಯೆಗಳು ನನಗೆ ತಿಳಿದಿದೆ. ತಮ್ಮ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಸಂತ್ರಸ್ತರಿಗೆ ಭರವಸೆ ನೀಡಿದರು.ತಾಲೂಕಿನಲ್ಲಿ ಭೀಮಾನದಿಯಿಂದ ಪ್ರವಾಹಕ್ಕೆ ಒಳಗಾದ ರೋಡಗಿ, ಮಿರಗಿ, ಖೇಡಗಿ, ಚಿಕ್ಕಮಣೂರ, ಗುಬ್ಬೇವಾಡ, ಶಿರಗೂರ, ಅಗರಖೇಡ, ಹಿಂಗಣಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳೊಂದಿಗೆ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಪ್ರವಾಹ ಹಾಗೂ ಮಳೆಯಿಂದ ಮುಂಗಾರು ಬೆಳೆಗಳಾದ ಹತ್ತಿ, ತೊಗರಿ, ಮೆಕ್ಕೆಜೋಳ, ಕಬ್ಬು, ಉದ್ದು ಹಾಗೂ ತೋಟಗಾರಿಕೆ ಬೆಳೆಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಲಿಂಬೆ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿವೆ. ಹಿಂಗಾರು ಬೆಳೆಯು ಕೈಗೊಳ್ಳದಂತೆ ಜಮೀನುಗಳಲ್ಲಿ ನೀರು ನಿಂತಿದೆ. ರೈತರ ಸಮಸ್ಯೆ ಕುರಿತು ಸಿಎಂ ಬಳಿ ಈಗಾಗಲೇ ಚರ್ಚಿಸಿದ್ದೇನೆ. ರೈತರಿಗೆ ಸಮರ್ಪಕ ಬೆಳೆ ಪರಿಹಾರ ಒದಗಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.ಮಹಾ ಮಳೆಗೆ ಮನೆಗೋಡೆಗಳು ಕುಸಿದಿವೆ. ಕೆಲವು ಮನೆಗಳು ಸಂಪೂರ್ಣ ಬಿದ್ದಿರುವ ಕುರಿತು ಪರಿಶೀಲಿಸಿದ್ದೇನೆ. ಮನೆಗೆ ಹಾನಿಯಾದ ಕುಟುಂಬಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ದೊರಕಿಸಿಕೊಡುವುದಾಗಿ ಹೇಳಿದರು. ಇನ್ನೂ ಪ್ರವಾಹದಿಂದ ಸರ್ಕಾರಿ, ಖಾಸಗಿ ಶಾಲೆ, ಅಂಗನವಾಡಿ, ಕಚೇರಿ ಕಟ್ಟಡಗಳು ಹಾಗೂ ರಸ್ತೆಗಳು ಹಾಳಾಗಿರುವ ಬಗ್ಗೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನಿಡಲಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ಫಲಾನುಭವಿಯ ಹೆಸರು ಬಿಟ್ಟು ಹೋಗದಂತೆ ಜಾಗೃತಿಯಿಂದ ವರದಿ ತಯಾರಿಸಲು ಸೂಚಿಸಲಾಗಿದೆ ಎಂದರು.
ಗ್ರಾಮಗಳ ಸ್ಥಳಾಂತರ:ಭೀಮಾನದಿ ಪ್ರವಾಹದಿಂದ ಬಾಧಿತವಾಗುವ ತಾಲೂಕಿನ ರೋಡಗಿ, ಮಿರಗಿ ಗ್ರಾಮಗಳ ಸ್ಥಳಾಂತರ ಹಾಗೂ ಹೊಸ ಬಡಾವಣೆ ನಿರ್ಮಾಣಕ್ಕೆ ಸರ್ಕಾರದ ಗಮನ ಸೆಳೆದು ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಹಾನಿಗೊಳಗಾದ ಸಾರ್ವಜನಿಕರು, ರೈತರು ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ಸರ್ಕಾರ, ನಾವು ಇದ್ದೇವೆ. ಧೈರ್ಯವಾಗಿ ಇರಬೇಕು. ತಾಲೂಕು ಆಡಳಿತದಿಂದ ಜನರ ರಕ್ಷಣೆಗಾಗಿ ಕಾಳಜಿ ಕೇಂದ್ರ, ಜಾನುವಾರುಗಳಿಗೆ ಗೋಶಾಲೆ ತೆರೆಯಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಶಾಸಕರೊಂದಿಗೆ ಎಸಿ ಅನುರಾಧಾ ವಸ್ತ್ರದ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ಇಒ ಡಾ.ಭೀಮಾಶಂಕರ ಕನ್ನೂರ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಎಇಇ ಹೆಸ್ಕಾ ಎಸ್.ಆರ್.ಮೆಡೆಗಾರ, ಪಿಆರ್‌ಡಿ ಎಇಇ ಶಿವಾಜಿ ಬನಸೋಡೆ, ಸಿಡಿಪಿಒ ಗೀತಾ ಗುತ್ತರಗಿಮಠ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.ಮತ್ತೆ ಭೀಮೆ ಅಬ್ಬರ ಏರಿಕೆ
ಭೀಮಾನದಿಗೆ ಉಜನಿ ಜಲಾಶಯ ಹಾಗೂ ಸಿನಾ ನದಿಯಿಂದ ಮತ್ತೆ 2.50 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಕೊಂಚ ಇಳಿದಿದ್ದ ಭೀಮಾನದಿ ಮತ್ತೇ ಪ್ರವಾಹಕ್ಕೆ ಎಡೆಮಾಡಿಕೊಟ್ಟಿದೆ. ಎರಡು ದಿನಗಳಿಂದ ಕಡಿಮೆಯಾಗಿದ್ದ ಭೀಮಾನದಿಯ ಹರಿಯುವಿಕೆಯ ನೀರಿನ ಮಟ್ಟ, ಸೋಮವಾರ ಮತ್ತೇ ಹೆಚ್ಚಾಗಿ ನೀರು ಭೀಮಾನದಿ ದಂಡೆಯ ಗ್ರಾಮಗಳತ್ತ ಮುಖ ಮಾಡಿದೆ.