ಸಾರಾಂಶ
ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಕನ್ನಡಪ್ರಭ ವಾರ್ತೆ ಬಳ್ಳಾರಿಜಿಲ್ಲೆಯಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯ ಮೂಲಕ ಅವರ ಆರೋಗ್ಯ ಜಾಗೃತಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಜವಾಬ್ದಾರಿ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬಳ್ಳಾರಿ(ನಗರ) ಹಾಗೂ ಗ್ರಾಮಾಂತರ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿನಗರ ವಲಯದ ಸತ್ಯಸಾಯಿ ಕಾಲನಿ ಮತ್ತು ಗೊಲ್ಲ ನರಸಪ್ಪ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆರೋಗ್ಯವಂತ ಮಕ್ಕಳಿಂದ ದೇಶ ಸದೃಢವಾಗುತ್ತದೆ. ಗರ್ಭಿಣಿಯರಿಗೆ ರಾಷ್ಟ್ರೀಯ ಪೋಷಣ್ ಅಭಿಯಾನದ ಮೂಲಕ ಪೌಷ್ಟಿಕಾಂಶ ಭರಿತ ಆಹಾರ ನೀಡಲಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಹಿಂದಿನಿಂದಲೂ ಈ ಭಾಗದಲ್ಲಿ ಅಪೌಷ್ಟಿಕತೆ ಸಮಸ್ಯೆ ಇದೆ. ಮಹಿಳೆಯರು ಯಾವ ರೀತಿಯಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಹೇಗೆ ನೀಡಬೇಕು ಎಂಬುದರ ಕುರಿತು ಈ ಪೋಷಣೆ ಅಭಿಯಾನದ ಸಂದರ್ಭದಲ್ಲಿ ತಿಳಿಸಿಕೊಡಬೇಕು ಎಂದು ಹೇಳಿದರು.ರಾಷ್ಟ್ರೀಯ ಪೋಷಣೆ ಅಭಿಯಾನ ಯೋಜನೆಯ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯನ್ನು ಪೋಷಣೆ ಮಾಸಾಚರಣೆ ಆಚರಿಸಲಾಗುತ್ತಿದ್ದು, ಇದರ ಉದ್ದೇಶ ಪೌಷ್ಠಿಕತೆ, ಕೈತೋಟದ ನಿರ್ಮಾಣ, ಅಪೌಷ್ಠಿಕ ಮಕ್ಕಳ ಗುರುತಿಸುವಿಕೆ ಮತ್ತು ಮಕ್ಕಳ ಪೂರಕ ಪೌಷ್ಠಿಕತೆಯ ಹಾಗೂ ರಕ್ತ ಹೀನತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಮಾತನಾಡಿ, ಇಂದು ನಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ. ತಾಯಿ ಮಗುವಿನ ಆರೋಗ್ಯದ ಕುರಿತ ಕೇಂದ್ರ ಸರ್ಕಾರ ಯೋಜನೆಯ ಪೋಷಣೆ ಅಭಿಯಾನ ಯೋಜನೆಯಡಿ ಪೌಷ್ಟಿಕಾಂಶ ಭರಿತ ಆಹಾರ ಸೇವನೆ ಸೇರಿದಂತೆ ಹಲವಾರು ಆರೋಗ್ಯ ಸಲಹೆಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಮಾದರಿ ಜಿಲ್ಲೆ ಮಾಡಲು ಶ್ರಮಿಸೋಣ ಎಂದು ತಿಳಿಸಿದರು.ಬಳ್ಳಾರಿ ನಗರ ಮತ್ತು ಗ್ರಾಮಾಂತರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೋಹನ್ ಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಈ ಒಂದು ವಾಕ್ಯ ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಆರೋಗ್ಯವಂತರಾಗಿ ಇರಬಹುದು ಎಂದರು.
ಕಾರ್ಯಕ್ರಮದಲ್ಲಿ ಈ ಬಾರಿಯ ಸುಪೋಷಿತ ಕಿಶೋರಿ, ಸಶಕ್ತ ನಾರಿ ಎಂಬ ಘೋಷವಾಕ್ಯದಂತೆ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನ ಕೈಗೊಳ್ಳಲಾಯಿತು. ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ವಿವಿಧ ಪೌಷ್ಟಿಕಾಂಶ ಭರಿತ ಆಹಾರಗಳ ಪ್ರದರ್ಶನ ನಡೆಯಿತು.ಈ ಸಂದರ್ಭ ಶಿಶು ಅಭಿವೃದ್ಧಿ ಯೋಜನೆ ಬಳ್ಳಾರಿ (ನಗರ)ದ ಎಂಟು ವೃತ್ತಗಳಾದ ಬಂಡಿಹಟ್ಟಿ, ಕೌಲ್‌ಬಜಾರ್, ಬ್ರೂಸ್‌ಪೇಟೆ, ಗಾಂಧಿನಗರ, ದೇವಿನಗರ, ಗುಗ್ಗರಹಟ್ಟಿ, ಮರಿಸ್ವಾಮಿ ಮಠ, ಮಿಲ್ಲರಪೇಟೆ ವಲಯದ ಎಲ್ಲಾ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಪೋಷಣೆ ಅಭಿಯಾನ ಸಿಬ್ಬಂದಿಗಳು ಮತ್ತು ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.