ಸಾರಾಂಶ
ದಾವಣಗೆರೆ : ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಬ್ಲಾಕ್ ನಿರ್ಮಾಣಕ್ಕೆ ₹17 ಕೋಟಿ, ಇತರೆ ಕಾಮಗಾರಿಗೆ ₹6 ಕೋಟಿ ಸೇರಿ ಒಟ್ಟು ₹23 ಕೋಟಿ ಮಂಜೂರಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.
ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಗುರುವಾರ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆ ನೂತನ ಬ್ಲಾಕ್ ಹಾಗೂ ಇತರೆ ಕಾಮಗಾರಿಗೆ ಒಟ್ಟು ₹23 ಕೋಟಿ ಮಂಜೂರಾಗಿದ್ದು, ಈ ಮೂಲಕ ಜಿಲ್ಲಾಸ್ಪತ್ರೆಗೆ ಕಾಯಕಲ್ಪ ನೀಡಲಾಗುವುದು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಇನ್ನು 2-3 ತಿಂಗಳಲ್ಲೇ ಎಂಆರ್‌ಐ ಅಳವಡಿಸಲಾಗುವುದು. ಈಗಾಗಲೇ ಟೆಂಡರ್ ಸಹ ಕರೆಯಲಾಗಿದೆ. ಉಚಿತವಾಗಿ ಎಂಆರ್‌ಐ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ, ಸಮಗ್ರ ಕೇಂದ್ರ ಪ್ರಯೋಗಾಲವಯವನ್ನೂ ಆರಂಭಿಸಲಾಗುವುದು. ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ಏನೇನು ಸಾಧ್ಯವೋ ಅದೆಲ್ಲವನ್ನೂ ಒದಗಿಸಲಾಗುವುದು ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಇಲ್ಲ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿದೆ. ದಾವಣಗೆರೆ ರೋಗಿಗಳು ಅಲ್ಲಿಗೆ ಹೋಗಬೇಕಾದ ಸ್ಥಿತಿಇದೆ. ಬಡವರು ಎಂಆರ್‌ಐಗಾಗಿ ಆರೇಳು ಸಾವಿರ ರು. ಎಲ್ಲಿಂದ ತರಬೇಕು? ಹಾಗಾಗಿ ನಮ್ಮ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲೇ ಎಂಆರ್‌ಐ ಅಳವಡಿಸಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.
ಐಸಿಯುನಲ್ಲಿ ಕೆಲಸ ಮಾಡಲು ಸೂಕ್ತ ಸಿಬ್ಬಂದಿ ಸಹ ಇಲ್ಲ. ಓಬಿರಾಯನ ಕಾಲದ ಎಕ್ಸ್‌ರೇ ಯಂತ್ರಗಳು ಇಲ್ಲಿವೆ. ಪ್ರಯೋಗಾಲಯ ಸಹ ಇಲ್ಲ. ದುಸ್ಥಿತಿಗೆ ಬಂದಿರುವ ಜಿಲ್ಲಾ ಆಸ್ಪತ್ರೆಯನ್ನು ಸುಸ್ಥಿತಿಗೆ ತರುವ ಕೆಲಸ ಆಗಬೇಕು. ಕೊರೋನಾ ಕಾಲದಲ್ಲಿ ಅಳವಡಿಸಿದ ಬಹುತೇಕ ಎಲ್ಲಾ ಯಂತ್ರಗಳು ನಕಲಿಯಾಗಿದ್ದು, ಯಾವುದೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೊರೋನಾ ಕಾಲದಲ್ಲಿ ಖರೀದಿಸಿದ ಎಲ್ಲದರ ಬಗ್ಗೆಯೂ ಸೂಕ್ತ ತನಿಖೆ ಮಾಡಿಸುವಂತೆ ಆಗ್ರಹಿಸಿದರು. ಹಳೆ ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ₹50 ಕೋಟಿಗೆ ಒತ್ತಾಯ
ದಾವಣಗೆರೆಯಲ್ಲಿ ಮಾನದಂಡಕ್ಕಿಂತ ಹೆಚ್ಚು ಬೆಡ್: ಎಸ್ಸೆಸ್ಸೆಂ
ಪ್ರತಿ ಸಾವಿರ ಜನರಿಗೆ ಒಂದು ಬೆಡ್ ಇರಬೇಕೆಂಬ ನಿಯಮವಿದ್ದು, ಆ ಮಾನದಂಡಕ್ಕಿಂತಲೂ ಹೆಚ್ಚಿನ ಬೆಡ್‌ಗಳು ದಾವಣಗೆರೆ ನಗರದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಇವೆ ಎಂದು ಗಣಿ ಮತ್ತು ಭೂ ವಿಜ್ಞಾನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.
ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಗುರುವಾರ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸೇರಿ ಸುಮಾರು 4 ಸಾವಿರ ಬೆಡ್‌ಗಳಿದ್ದು, ಇಲ್ಲಿನ ಜನಸಂಖ್ಯೆ ಸುಮಾರು 5 ಲಕ್ಷ ಇದೆ. ಹಳೆ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಿಗೆ ಕೆಲ ಅಗತ್ಯ ಕಾಯಕಲ್ಪಗಳ ಅಗತ್ಯವಿದೆ. ಇದಕ್ಕಾಗಿ ತಕ್ಷಣದ ಕ್ರಮವಾಗಿ ₹50 ಕೋಟಿ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅನೇಕ ಕಾರ್ಯಕ್ರಮ, ಸೌಲಭ್ಯ ನೀಡುತ್ತಿದ್ದರೂ ಅವು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. 6 ತಿಂಗಳ ಹಿಂದೆ ಎಸ್ಸೆಸ್ ಕೇರ್ ಟ್ರಸ್ಟ್ ಮೂಲಕ ಆರೋಗ್ಯ ತಪಾಸಣೆ ಮಾಡುವ ವೇಳೆ 8 ತಿಂಗಳ ಗರ್ಭಿಣಿ ಯಾವುದೇ ಚುಚ್ಚುಮದ್ದು, ಚಿಕಿತ್ಸೆ ಪಡೆಯದಿರುವುದು ಗಮನಕ್ಕೆ ಬಂದಿತು. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ. ಆರೋಗ್ಯ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು ಎಂದು ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))