ಸಾರಾಂಶ
ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿರುವ ೩೦ನೇ ವರ್ಷದ ಆಳ್ವಾಸ್ ವಿರಾಸತ್‌ನಲ್ಲಿ ಕೇವಲ ಕಣ್ಣು- ಮಿದುಳಿಗೆ ಸಾಂಸ್ಕೃತಿಕ ಹಬ್ಬ ಮಾತ್ರವಲ್ಲ, ಆವರಣ ಪ್ರವೇಶಿಸುತ್ತಿದ್ದಂತೆಯೇ ಅಡುಗೆ ಮನೆಯ ಘಮಲು ಸೆಳೆಯುತ್ತದೆ.
ಉತ್ತರ-ದಕ್ಷಿಣ, ದೇಶೀಯ -ಪಾಶ್ಚಾತ್ಯ ಸೇರಿದಂತೆ ಎಲ್ಲ ರೀತಿಯ ಆಹಾರ ಪ್ರಿಯರ ನಾಸಿಕಕ್ಕೂ ಪರಿಮಳ ಅಪ್ಪಳಿಸುತ್ತದೆ. ಇದಕ್ಕೆ ಕಾರಣ ವೈವಿಧ್ಯಮಯ ತಿನಿಸು. ಆಳ್ವಾಸ್ ವಿರಾಸತ್‌ನ ಆಹಾರ ಮೇಳದಲ್ಲಿ ಅಂಟಿನ ಉಂಡೆ - ಆರಾಧ್ಯ ಕರದಂಟು ಮಾರಾಟ ಜನರ ಗಮನ ಸೆಳೆಯುತ್ತಿದೆ.ಯಾವುದೇ ಕಲಬೆರಕೆ ಪದಾರ್ಥಗಳನ್ನು ಉಪಯೋಗಿಸದೆ ಸಾಂಪ್ರದಾಯಿಕ ಅಲ್ವಿ ಬೀಜ, ನೈಸರ್ಗಿಕ ಬೆಲ್ಲ, ಒಣ ಕೊಬ್ಬರಿ , ಗೇರುಬೀಜ, ಬಾದಾಮಿ, ಪಿಸ್ತಾ, ತುಪ್ಪ, ಒಣ ಕಾಜು, ಅಂಜೂರ ಮತ್ತು ಇನ್ನಿತರ ೧೬ ವಿವಿಧ ಡ್ರೈ ಫ್ರೂಟ್ಸ್ ಬಳಸಿಕೊಂಡು ಆರೋಗ್ಯದಾಯಕ ಸಿಹಿ ತಿನಿಸನ್ನು ತಯಾರಿಸಿ ಮಾರುತ್ತಿದ್ದಾರೆ.ಅಂಟಿನ ಲಡ್ಡುಗಳನ್ನು ತಿನ್ನುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಮೆಗ್ನೀಶಿಯಂನಂತಹ ಖನಿಜಗ ಪೋಷಕಾಂಶಗಳು ಅಂಟಿನಲ್ಲಿ ಇವೆ. ಹೀಗಾಗಿ ಉತ್ತರ ಕರ್ನಾಟಕದ ಈ ತಿನಿಸು ಅತ್ಯುತ್ತಮ ಎನ್ನುತ್ತಾರೆ ಮಾರಾಟಗಾರರು.
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಆದ್ದರಿಂದ ಬೇಗನೇ ಆಯಾಸವಾಗುತ್ತದೆ. ಬೆಲ್ಲವು ದೇಹಕ್ಕೆ ಶಕ್ತಿಯನ್ನು ಒದಗಿಸುವ ಪೌಷ್ಟಿಕಾಂಶದ ಅಂಶಗಳನ್ನು ಹೇರಳವಾಗಿ ಹೊಂದಿರುತ್ತದೆ ಎಂದು ವಿವರಿಸಿದರು.ಕ್ಯಾಲ್ಶಿಯಂ ಹೇರಳವಾಗಿರುವ ಕಾರಣ ಚಳಿಗಾಲದಲ್ಲಿ ಗರ್ಭಿಣಿಯರಿಗೆ ಅಂಟಿನ ಉಂಡೆ ಸೇವನೆ ಉತ್ತಮ. ಇಂತಹ ಆರೋಗ್ಯದಾಯಕ ಸಿಹಿ ತಿನಿಸು ಆಳ್ವಾಸ್ ವಿರಾಸತ್ ನ ಪ್ರೇಕ್ಷಕ ವರ್ಗದವರನ್ನು ಕೈ ಬೀಸಿ ಕರೆಯುತ್ತಿದೆ.
ಅಷ್ಟು ಮಾತ್ರವಲ್ಲ, ಇನ್ನಷ್ಟು ಆಹಾರದ ಪಟ್ಟಿಯೇ ಇದೆ. ನೀವೇ ಬರಬೇಕು. ತಿಂದು ಸಂಭ್ರಮಿಸಬೇಕು. ಡಿ.೧೫ರ ವರೆಗೆ ನಿಮಗಾಗಿ ಆಹಾರ ವೈವಿಧ್ಯ ತೆರೆದಿರುತ್ತದೆ. -ವೀಕ್ಷಿತಾ ವಿ.ಪತ್ರಿಕೋದ್ಯಮ ವಿದ್ಯಾರ್ಥಿನಿ, ಆಳ್ವಾಸ್ (ಸ್ವಾಯತ್ತ) ಕಾಲೇಜು, ಮೂಡುಬಿದಿರೆ