ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸೊಪ್ಪಿನ ವ್ಯಾಪಾರಸ್ಥರಿಗೆ ಡಿ.22ರ ಒಳಗಾಗಿ ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲು ಎಲ್ಲಾ ಅಗತ್ಯ ವ್ಯವಸ್ಥೆ ಕಲ್ಪಿಸಲಿದ್ದು, ಜ.10ರ ಒಳಗಾಗಿ ಸೊಪ್ಪಿನ ವ್ಯಾಪಾರಸ್ಥರು ಅಲ್ಲಿಗೆ ಸ್ಥಳಾಂತಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚಿಸಿದ್ದಾರೆ. ನಗರದ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸೊಪ್ಪಿನ ಮಾರುಕಟ್ಟೆ ಸ್ಥಳಾಂತರಿಸುವ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಮಂಡಿಪೇಟೆ, ಚೌಕಿಪೇಟೆ ಸುತ್ತಲಿನ ಪ್ರದೇಶದಲ್ಲಿ ವಾಹನ ನಿಲುಗಡೆಗೆ ತೊಂದರೆ, ವಾಯುಮಾಲಿನ್ಯ, ಸ್ವಚ್ಛತೆಗೆ ತೀವ್ರ ಸಮಸ್ಯೆಯಾದ ಹಿನ್ನೆಲೆ ಸೊಪ್ಪಿನ ವ್ಯಾಪಾರಸ್ಥರು ಎಪಿಎಂಸಿಗೆ ಸ್ಥಳಾಂತರಗೊಳ್ಳುವುದು ಅನಿವಾರ್ಯ ಎಂದರು.ದಿನದಿನಕ್ಕೂ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ವಾಹನ ನಿಲುಗಡೆಗೆ ತೀವ್ರ ಸಮಸ್ಯೆಯಾಗುತ್ತಿದೆ. ಇದರಿಂದ ಸಾಕಷ್ಟು ಅನಾನುಕೂಲವಾಗುತ್ತಿದ್ದು, ಜನರಿಗೂ ತೊಂದರೆಯಾಗುತ್ತಿದೆ. ಸೊಪ್ಪಿನ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸುವುದರಿಂದ ಸಮಸ್ಯೆಗೆ ಸಾಕಷ್ಟು ಮುಕ್ತಿ ಸಿಕ್ಕಂತಾಗುತ್ತದೆ. ನೀವೂ ಸಹ ಜ.10ರ ಒಳಗಾಗಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಆಗಲೇಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಪೈಕಿ ಶೇ. 80ರಷ್ಟು ವಿದೇಶದಿಂದ ಬರುತ್ತದೆ. ಹೀಗೆ ಅಲ್ಲಿಂದ ತೈಲ ತರಿಸಿಕೊಳ್ಳಲು ನಮ್ಮ ದುಡ್ಡನ್ನು ಡಾಲರ್‌ಗೆ ಬದಲಾವಣೆ ಮಾಡಿ, ನಾವು ಪಡೆಯಬೇಕು. ಜನದಟ್ಟಣೆ, ವಾಹನದಟ್ಟಣೆ, ಕಿರಿದಾದ ರಸ್ತೆಗಳ ಕಾರಣಕ್ಕೆ ಸಂಚಾರ ದಟ್ಟಣೆಯಾಗುತ್ತದೆ. ಇದರಿಂದ ಮಾಲಿನ್ಯ, ಇಂಧನ ವ್ಯಯ ಸೇರಿದಂತೆ ನಿತ್ಯವೂ ಅನೇಕ ಸಮಸ್ಯೆ ಎದುರಾಗುತ್ತವೆ. ಇದಕ್ಕೆಲ್ಲಾ ಪರಿಹಾರವೆಂದರೆ ಸೊಪ್ಪಿನ ವ್ಯಾಪಾರಸ್ಥರ ಸ್ಥಳಾಂತರ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.ಎಪಿಎಂಸಿಯಲ್ಲಿ ಸೊಪ್ಪಿನ ವ್ಯಾಪಾರಸ್ಥರಿಗೆ ಮಳಿಗೆಗಳ ಬಾಡಿಗೆ ಹೊರೆಯಾಗದಂತೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲಿ ಶೌಚಾಲಯ, ವಾಹನ ನಿಲುಗಡೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಇತರೆ ವ್ಯಾಪಾರಸ್ಥರಿಗೆ ಎಲ್ಲಿ ಸೂಕ್ತ ಜಾಗ ಇದೆಯೋ ಅಂತಹ ಸ್ಥಳಗಳನ್ನು ಗುರುತಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಅನುಕೂಲ ಮಾಡಿಕೊಡಲಾಗುವುದು. ಎಪಿಎಂಸಿ ಮಾರುಕಟ್ಟೆ ಮಳಿಗೆ ಬೇಕೆಂದರೆ ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು. ಹಳೆ ಲೈಸೆನ್ಸ್ ಇದ್ದವರಿಗೆ ಮೊದಲ ಆದ್ಯತೆ ಎಂದು ಡಿಸಿ ಗಂಗಾಧರಸ್ವಾಮಿ ಸ್ಪಷ್ಟಪಡಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಹಬ್ಬ ಹರಿದಿನಗಳಲ್ಲಿ ವಾಹನ ನಿಲುಗಡೆಗೆ ತೀವ್ರ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಸೊಪ್ಪಿನ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಎಪಿಎಂಸಿ ಮಾರುಕಟ್ಟೆಗೆ ನಿಮ್ಮ ವ್ಯಾಪಾರ, ವಹಿವಾಟು ಸ್ಥಳಾಂತರಿಸಲಾಗುತ್ತಿದೆ. ಹೊಸ ಜಾಗಕ್ಕೆ ಹೋದ ತಕ್ಷಣ ಹೊಂದಿಕೊಳ್ಳುವುದು ಕಷ್ಟವಾದರೂ, ಕ್ರಮೇಣ ವ್ಯಾಪಾರ ವಹಿವಾಟು ಹೆಚ್ಚುತ್ತದೆ. ವಾಹನ ನಿಲುಗಡೆ, ಇತ್ಯಾದಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎಂದು ಹೇಳಿದರು.ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಮನೆಗೆ ಒಂದೋ, ಎರಡೋ ವಾಹನಗಳು ಸಹ ಇವೆ. ಮುಂದಿನ ದಿನಗಳಲ್ಲಿ ನಗರದಲ್ಲಿ ವಾಹನ ನಿಲುಗಡೆಗೆ ತೀವ್ರ ಸಮಸ್ಯೆ ತಲೆದೋರುವುದು ನಿಶ್ಚಿತ. ದಾವಣಗೆರೆಯ ಭವಿಷ್ಯದ ದೃಷ್ಟಿಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ನಿಲುಗಡೆಗೆ ಸಮಸ್ಯೆಯಾಗದಂತೆ ಎಪಿಎಂಸಿ ಮಾರುಕಟ್ಟೆಗೆ ಸೊಪ್ಪಿನ ವ್ಯಾಪಾರ ಸ್ಥಳಾಂತರಿಸಲಾಗುತ್ತಿದೆ. ಇದರಿಂದ ಸ್ವಚ್ಛತೆ ಜೊತೆಗೆ ವಾಹನ ಸಂಚಾರಕ್ಕೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಉಪ ಮೇಯರ್ ಸೋಗಿ ಶಾಂತಕುಮಾರ, ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ, ಆಶಾ ಉಮೇಶ, ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ, ಸದಸ್ಯರಾದ ಜಿ.ಎಸ್. ಮಂಜುನಾಥ ಗಡಿಗುಡಾಳ ಇತರರು ಇದ್ದರು.