ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಿಬಿ -ಜಿ ರಾಮ್‌ ಜಿ ಯೋಜನೆಯ ಅನುಷ್ಠಾನದಿಂದಾಗುವ ಪ್ರಯೋಜನವನ್ನು ಜನರಲ್ಲಿ ಜಾಗೃತಿ ಮೂಡಿಸಲು ಜ.29 ರಂದು ಗೊಡಚಿ ಕ್ಷೇತ್ರದಿಂದ ರಾಮದುರ್ಗವರೆಗೆ ಪಾದಯಾತ್ರೆಯನ್ನು ಬಿಜೆಪಿ ಮಂಡಲದಿಂದ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಡಾ.ಕೆ.ವಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ ನಿರ್ಮಾಣದ ಆಶಯವೇ ವಿಬಿ ಜಿ ರಾಮ್‌ ಜಿಯಾಗಿದ್ದು ವಿಪಕ್ಷಗಳು ಈ ಯೋಜನೆಯ ಕುರಿತು ಅಪಪ್ರಚಾರ ಮಾಡುತ್ತಿವೆ. ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಮರೆಮಾಚಿ ಯೋಜನೆಯ ಹೆಸರು ಬದಲಿಸಿರುವುದನ್ನೇ ದೊಡ್ಡದಾಗಿ ಮಾಡಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಜನರಿಗೆ ಹೆಚ್ಚು ದಿನ ಉದ್ಯೋಗ ನೀಡಲು ಮತ್ತು ಪಾರದರ್ಶಕ ಅನುಷ್ಠಾನದ ಕುರಿತು ಜಾಗೃತಿ ಮೂಡಿಸಲು ಗುರುವಾರ ಬೆಳಗ್ಗೆ 9.30ಕ್ಕೆ ಗೊಡಚಿ ವೀರಭದ್ರೇಶ್ವರ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಪಾದಯಾತ್ರೆ ಮಾರ್ಗದಲ್ಲಿ ಬರುವ ನರಸಾಪೂರ, ಸುನ್ನಾಳ ಮತ್ತು ತುರನೂರ ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.ಸಂಜೆ 4 ಗಂಟೆಗೆ ರಾಮದುರ್ಗದ ಬಿಜೆಪಿ ಕಾರ್ಯಾಲಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಪಾದಯಾತ್ರೆ ಮತ್ತು ಕಾರ್ಯಕ್ರಮದಲ್ಲಿ ತಾಲೂಕಿನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರು, ತಾಲೂಕು ಮತ್ತು ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಮಂಡಲ ಉಪಾಧ್ಯಕ್ಷ ಸಿ.ಬಿ.ಪಾಟೀಲ, ದ್ಯಾವಪ್ಪ ಬೆಳವಡಿ, ಕಾರ್ಯದರ್ಶಿ ಈರನಗೌಡ ಪಾಟೀಲ, ಮಾಧ್ಯಮ ಪ್ರಮುಖರಾದ ಮಲ್ಲಿಕಾರ್ಜುನ ಭಾವಿಕಟ್ಟಿ, ಬಸವರಾಜ ಮಾಧನ್ನವರ ಸೇರಿದಂತೆ ಹಲವರಿದ್ದರು.