ಗುರುವಾಯನಕೆರೆ: ಹತ್ತನೇ ತರಗತಿಯ ಬಳಿಕ ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಬುದ್ಧಿವಂತಿಕೆ ಇದೆ. ಎಕ್ಸೆಲ್ ನ್ನು ಆಯ್ಕೆ ಮಾಡಿಕೊಂಡ ನೀವು ಬುದ್ಧಿವಂತರು. ಯಾಕೆಂದರೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಏಮ್ಸ್, ಜಿಪ್ಮಾರ್, ಐ ಐ ಟಿ , ಎನ್ ಐ ಐ ಟಿ ಸೇರಿ ಭಾರತದ ಪ್ರತಿಷ್ಠಿತ ಸಂಸ್ಥೆಗಳಿಗೆ ಹಲವು ವಿದ್ಯಾರ್ಥಿಗಳನ್ನು ಕಳುಹಿಸಿ ಕೊಟ್ಟ ಹಿರಿಮೆ ಎಕ್ಸೆಲ್ ನದು. ಇಂಥ ಸಂಸ್ಥೆಯಲ್ಲಿ ಗುರುಗಳು ಹೇಳಿಕೊಟ್ಟದ್ದನ್ನು ಶ್ರದ್ಧೆಯಿಂದ ಕಲಿತರೆ ಸಾಕು. ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂದು ಚಿತ್ರ ನಿರ್ದೇಶಕ, ಮನೋ ವಿಶ್ಲೇಷಕ ಸ್ಮಿತೇಶ್ ಬಾರ್ಯ ಅವರು ಹೇಳಿದರು.ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾ ಸಾಗರ ಕ್ಯಾಂಪಸ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯಂಟೇಶನ್- ಸ್ವಾಗತಂ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಎಕ್ಸೆಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಸ್ತುತ ಐ ಐ ಟಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಅಚಿಂತ್ಯದಾಸ್ ಅಳದಂಗಡಿ ಅವರು ಮಾತನಾಡಿ, ಪಿಯುಸಿಯ ಎರಡು ವರ್ಷ ಕಠಿಣ ಶ್ರಮದ ಮೂಲಕ ನಮ್ಮ ಗುರಿ ಸಾಧನೆಗೆ ತಳಪಾಯ ಹಾಕಿ ಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಮಾತನಾಡಿ, ವಿದ್ಯಾರ್ಥಿಗಳ ಗುರಿ ಈಡೇರಿಸಲು ನಾವು ಸಂಪೂರ್ಣ ಬದ್ಧರಾಗಿರುತ್ತೇವೆ. ನಿಮ್ಮ ಕನಸು ನನಸು ಮಾಡುವುದೇ ನಮ್ಮ ಗುರಿ ಎಂದು ಹೇಳಿದರು. ನೀಟ್ ಪರೀಕ್ಷೆಯ ಬಗ್ಗೆ ಭೌತ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ ಸತ್ಯನಾರಾಯಣ ಭಟ್, ಜೆ ಇ ಇ, ಸಿ ಇ ಟಿ ಪರೀಕ್ಷೆಗಳ ಬಗ್ಗೆ ಭೌತ ವಿಜ್ಞಾನ ವಿಭಾಗದ ಶ್ರೀನಿಧಿ ರಾಜ್ ಶೆಟ್ಟಿ ಮಾಹಿತಿ ನೀಡಿದರು.ಪಿಯುಸಿ ಹಾಗೂ ಸಿ ಇ ಟಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹತ್ತನೆಯ ತರಗತಿಯಲ್ಲಿ ಪೂರ್ಣಾಂಕ ಪಡೆದು, ಪ್ರಥಮ ಪಿಯುಸಿಗೆ ಎಕ್ಸೆಲ್ ನಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಎಕ್ಸೆಲ್ ಕಾಲೇಜು ವಿದ್ಯಾ ಸಾಗರ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಎಂ ಸ್ವಾಗತಿಸಿದರು. ಆರಮಲೆ ಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯ ಡಾ ಪ್ರಜ್ವಲ್ ಕಜೆ ವಂದಿಸಿದರು. ಉಪನ್ಯಾಸಕ ಮೊಹಮ್ಮದ್ ಮುನೀರ್ ನಿರೂಪಿಸಿದರು.