ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಯಾವುದೇ ರೀತಿಯಲ್ಲಿ ಕಡೆಗಣಿಸುತ್ತಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಂತೆ ಬೆಳಗಾವಿಯಲ್ಲೂ ಕ್ರಿಕೆಟ್ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬಿಸಿಸಿಐ ದೇಶೀಯ ಪಂದ್ಯಗಳನ್ನು ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೆಎಸ್‌ಸಿಎ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಯಾವುದೇ ರೀತಿಯಲ್ಲಿ ಕಡೆಗಣಿಸುತ್ತಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಂತೆ ಬೆಳಗಾವಿಯಲ್ಲೂ ಕ್ರಿಕೆಟ್ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬಿಸಿಸಿಐ ದೇಶೀಯ ಪಂದ್ಯಗಳನ್ನು ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೆಎಸ್‌ಸಿಎ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಹೇಳಿದರು.

ನಗರದ ಬಿಕೆ ಮಾಡೆಲ್ ಶಾಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಮತ್ತು ಹುಬ್ಬಳ್ಳಿ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ಬೆಳಗಾವಿಯಲ್ಲಿ ಅತ್ಯುತ್ತಮ ಗುಣಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣಗೊಂಡಿದೆ. ಇಲ್ಲಿನ ಯುವಕರಲ್ಲಿ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇದೆ. ರಾಜ್ಯದ ಪ್ರಮುಖ ಕ್ರಿಕೆಟ್ ಕೇಂದ್ರಗಳಲ್ಲಿ ಬೆಳಗಾವಿಯೂ ಒಂದಾಗಿದೆ. ಆದರೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜಿಸಲು ಕೇವಲ ಮೈದಾನವಿದ್ದರೆ ಸಾಲದು, ಆಟಗಾರರ ವಸತಿ, ಅಭ್ಯಾಸ ಸೌಲಭ್ಯಗಳು, ನೀರಿನ ವ್ಯವಸ್ಥೆ, ಕ್ರೀಡಾ ಮೂಲಸೌಕರ್ಯ ಸೇರಿ ಹಲವು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ ಎಂದು ತಿಳಿಸಿದರು.

ಮಹಾರಾಜ ಟ್ರೋಫಿಯಲ್ಲಿ ಬೆಳಗಾವಿಗೆ ಪ್ರತ್ಯೇಕ ತಂಡ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ತಂಡಗಳ ಸಂಖ್ಯೆಯನ್ನು ಭವಿಷ್ಯದಲ್ಲಿ ಹೆಚ್ಚಿಸುವ ಸಾಧ್ಯತೆ ತಳ್ಳಿಹಾಕಲಾಗುವುದಿಲ್ಲ. ಐಪಿಎಲ್ ಆರಂಭದಲ್ಲಿ ಎಂಟು ತಂಡಗಳಿಂದ ಶುರುವಾಗಿ ಇಂದು ಹತ್ತು ತಂಡಗಳಾಗಿವೆ. ಅದರಂತೆ ಮಹಾರಾಜ ಟ್ರೋಫಿಯೂ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ರಾಜ್ಯದ ವಿವಿಧ ಭಾಗಗಳಿಗೆ ಕ್ರಿಕೆಟ್ ವಿಸ್ತರಿಸುವುದು ಕೆಎಸ್‌ಸಿಎ ಮುಖ್ಯ ಉದ್ದೇಶವಾಗಿದೆ. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ರಾಯಚೂರು, ಶಿವಮೊಗ್ಗ, ಮಂಗಳೂರು ಸೇರಿದಂತೆ ಎಲ್ಲ ಪ್ರದೇಶಗಳಲ್ಲೂ ಕ್ರಿಕೆಟ್ ಚಟುವಟಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕ್ರಿಕೆಟ್ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು ಎಂಬುದು ನಮ್ಮ ಧ್ಯೇಯ ಎಂದರು.

ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಬಿಸಿಸಿಐ ದೇಶೀಯ ಪಂದ್ಯಗಳ ಆಯೋಜನೆಗೆ ಆದ್ಯತೆ ನೀಡುತ್ತಿದೆ. ಅಂತಾರಾಷ್ಟ್ರೀಯ ತಂಡಗಳ ಸಂಚಾರ, ವಸತಿ ಮತ್ತು ಇತರ ವ್ಯವಸ್ಥೆಗಳ ಕಾರಣದಿಂದ ಕೆಲವು ಸವಾಲುಗಳಿವೆ. ಆದರೂ ಮುಂದಿನ ದಿನಗಳಲ್ಲಿ ಬೆಳಗಾವಿಯ ಕ್ರಿಕೆಟ್ ಮೂಲಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆಎಸ್‌ಸಿಎ ಬದ್ಧವಾಗಿದೆ. ಹುಬ್ಬಳ್ಳಿಯ ಅವಿನಾಶ್ ವೈದ್ಯ ಅವರು ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿ ಆಯ್ಕೆಯಾಗಿರುವುದು ಉತ್ತರ ಕರ್ನಾಟಕದ ಕ್ರಿಕೆಟ್ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ. ರಾಜ್ಯದ ಗ್ರಾಮೀಣ ಭಾಗಗಳಿಗೂ ಕ್ರಿಕೆಟ್ ತಲುಪಿಸುವ ಪ್ರಯತ್ನಗಳು ಮುಂದುವರಿಯಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ವಿ.ಎನ್. ಪಾಟೀಲ, ಅಧ್ಯಕ್ಷ ವಿಲಾಸ ಜೋಶಿ, ಬಿಇ ಸೊಸೈಟಿ ಅಧ್ಯಕ್ಷ ಅವಿನಾಶ ಪೋತದಾರ, ಶ್ರೀನಿವಾಸ ಶಿವಣಗಿ ಮತ್ತಿತರರು ಉಪಸ್ಥಿತರಿದ್ದರು.---------

ಕೋಟ್‌

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪುನರ್ ಅಭಿವೃದ್ಧಿಯಲ್ಲಿ ಕ್ರೀಡಾಂಗಣದ ಆಸನ ಸಾಮರ್ಥ್ಯವನ್ನು 55 ಸಾವಿರಕ್ಕೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರದ ಸಹಕಾರದಿಂದ ಐಪಿಎಲ್, ಏಕದಿನ ಹಾಗೂ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಕರ್ನಾಟಕಕ್ಕೆ ತರಲು ಸಾಧ್ಯವಾಗಿದೆ. ಬೆಳಗಾವಿಗೆ ಹೆಚ್ಚಿನ ಕ್ರಿಕೆಟ್ ಪಂದ್ಯಗಳು ಬರಲಿವೆ. ಕ್ರಿಕೆಟ್ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಭೇದಭಾವಕ್ಕೆ ಯಾವುದೇ ಅವಕಾಶವಿಲ್ಲ.

ವೆಂಕಟೇಶ ಪ್ರಸಾದ, ಕೆಎಸ್‌ಸಿಎ ಅಧ್ಯಕ್ಷ