ಕನ್ನಡಪ್ರಭ ವಾರ್ತೆ ಬೆಳಗಾವಿ
ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಆಸಕ್ತಿ, ಛಲ, ಶಿಸ್ತು, ಪರಿಶ್ರಮ ಮತ್ತು ಬದ್ಧತೆ ಇದ್ದರೆ ಮಾತ್ರ ಸಾಧನೆಯ ಶಿಖರ ತಲುಪಲು ಸಾಧ್ಯ ಎಂದು ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ ಹೇಳಿದರು.ನಗರದ ಬಿ.ಕೆ.ಮಾಡೆಲ್ ಶಾಲೆಯ ಆವರಣದಲ್ಲಿ ಶನಿವಾರ ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳು ಮತ್ತು ಕ್ರಿಕೆಟ್ ಬದುಕಿನ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ನಾನು ಓದಿದ ಶಾಲೆಯ ವಾತಾವರಣವೂ ಇದೇ ರೀತಿಯಲ್ಲಿತ್ತು. ಆಗ ಹೈಟೆಕ್ ಸೌಲಭ್ಯಗಳಿರಲಿಲ್ಲ. ಬ್ಲ್ಯಾಕ್‌ಬೋರ್ಡ್, ಚಾಕ್‌ಪೀಸ್ ಹಾಗೂ ಸರಳ ತರಗತಿ ಕೊಠಡಿಗಳಲ್ಲೇ ನಾವು ಶಿಕ್ಷಣ ಪಡೆದಿದ್ದೇವೆ. ಆದರೆ, ಅಲ್ಲಿ ಕಲಿತ ಶಿಸ್ತು, ಸ್ನೇಹ ಮತ್ತು ತಂಡದ ಭಾವನೆ ಜೀವನಪೂರ್ತಿ ನೆರವಾಯಿತು ಎಂದು ಹೇಳಿದರು.
ನಮ್ಮ ಶಾಲೆಯಲ್ಲಿ ಕ್ರಿಕೆಟ್ ಸೌಲಭ್ಯ ಇರಲಿಲ್ಲ. ನಾನು ಹಾಕಿ ಆಟವಾಡುತ್ತಿದ್ದೆ. ಆದರೆ ಐಟಿಐ ಕಾಲೋನಿಯ ಮೈದಾನದಲ್ಲಿ ಪ್ರತಿದಿನ ಕ್ರಿಕೆಟ್ ಆಡುತ್ತಿದ್ದೆ. ಅಲ್ಲಿಂದಲೇ ಕ್ರಿಕೆಟ್ ಮೇಲಿನ ಪ್ರೀತಿ ಬೆಳೆಯಿತು. 1983ರ ವಿಶ್ವಕಪ್ ಗೆಲುವು ತಮ್ಮ ಬದುಕಿನ ಮೇಲೆ ಬೀರಿದ ಪರಿಣಾಮವನ್ನು ಸ್ಮರಿಸಿದ ಅವರು, ಆಗ ನನಗೆ 13 ವರ್ಷ. ನಮ್ಮ ಮನೆಯಲ್ಲಿ ಟೀವಿ ಇರಲಿಲ್ಲ. ಆದರೆ ಭಾರತ ವಿಶ್ವಕಪ್ ಗೆದ್ದ ಸುದ್ದಿ ಕೇಳಿದಾಗ ಉಂಟಾದ ಸಂತೋಷ ಅಪಾರ. ಆ ಗೆಲುವು ನನ್ನೊಳಗೆ ಕ್ರೀಡೆಯ ಬಗ್ಗೆ ದೊಡ್ಡ ಪ್ರೇರಣೆ ಮೂಡಿಸಿತು ಎಂದರು.ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‌ಗಳು, ಕಲಾವಿದರು ಅಥವಾ ಕ್ರೀಡಾಪಟುಗಳಾಗಬೇಕೆಂದರೆ ಮೊದಲು ಆಯ್ಕೆ ಮಾಡಿಕೊಂಡ ಕ್ಷೇತ್ರದ ಬಗ್ಗೆ ನಿಜವಾದ ಆಸಕ್ತಿ ಇರಬೇಕು. ಅದಕ್ಕೆ ಶಿಸ್ತು, ಕಠಿಣ ಪರಿಶ್ರಮ ಮತ್ತು ಬದ್ಧತೆ ಸೇರಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಒಂದು ಕೌಶಲ್ಯದಲ್ಲಿ ಪರಿಣತಿ ಪಡೆಯಲು ಸಾವಿರಾರು ಬಾರಿ ಅಭ್ಯಾಸ ಮಾಡಬೇಕು. ಕ್ರಿಕೆಟ್‌ನಲ್ಲಿ ಒಂದು ಚೆಂಡು, ಒಂದು ಶಾಟ್ ಅಥವಾ ಒಂದು ತಂತ್ರವನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿದಾಗ ಮಾತ್ರ ಪರಿಪೂರ್ಣತೆ ಬರುತ್ತದೆ. ಕ್ರಿಕೆಟ್‌ನಲ್ಲಿ ಗೆಲುವು ಕೇವಲ 11 ಆಟಗಾರರ ಸಾಧನೆಯಲ್ಲ, ಆಡದ ಆಟಗಾರರೂ ತಂಡದ ಯಶಸ್ಸಿನ ಭಾಗವೇ. ಜೀವನದಲ್ಲಿಯೂ ತಂಡವಾಗಿ ಕೆಲಸ ಮಾಡುವ ಮನೋಭಾವ ಅಗತ್ಯ ಎಂದರು.
ಸವದತ್ತಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಸ್ಪಷ್ಟ ಗುರಿ ಇರಬೇಕು. ಗುರಿಯೊಂದಿಗೆ ಶ್ರಮ, ಶ್ರದ್ಧೆ ಮತ್ತು ಬದ್ಧತೆಯೂ ಅಗತ್ಯ. 1994ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ತೆರಳಿ ವಿಧಾನಸೌಧ ನೋಡಿದಾಗ ಒಂದು ದಿನ ಜನಪ್ರತಿನಿಧಿಯಾಗಿ ಸದನ ಪ್ರವೇಶಿಸಬೇಕು ಎಂಬ ಕನಸು ಮೂಡಿತ್ತು. ಜನರ ಆಶೀರ್ವಾದದಿಂದ ಆ ಕನಸು ನನಸಾಯಿತು ಎಂದು ಹೇಳಿದರು.
ಸತ್ಯಾತ್ಮತೀರ್ಥ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ವಿ.ಎನ್.ಪಾಟೀಲ ಮಾತನಾಡಿ, ಪ್ರಕೃತಿಯನ್ನು ದೇವರಂತೆ ಕಾಣುವ ಸಂಸ್ಕೃತಿ ನಮ್ಮದು. ಇಂದು ಪರಿಸರ ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜ ಒಟ್ಟಾಗಿ ಈ ಜವಾಬ್ದಾರಿ ನಿಭಾಯಿಸಬೇಕು ಎಂದು ಕರೆ ನೀಡಿದರು.ಸಂಸ್ಥೆಯ ಅಧ್ಯಕ್ಷ ವಿಲಾಸ ಜೋಶಿ, ಬಿಇ ಸೊಸೈಟಿ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಅಧ್ಯಕ್ಷ ಅವಿನಾಶ್ ಪೋತದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೀಪಾ ಹಂಜಿ ನಿರೂಪಿಸಿದರು. ಮಧುಕರ ತೇರದಾಳ ಸ್ವಾಗತಿಸಿದರು. ಸುಧನ್ವಾ ಹುಕ್ಕೇರಿ ವಂದಿಸಿದರು. ಬೆಳಗಾವಿಗೆ ಆಗಮಿಸಿದ್ದ ವೆಂಕಟೇಶ್ ಪ್ರಸಾದ್‌ರನ್ನು ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಸೇರಿ ಗಣ್ಯರು ಸ್ವಾಗತಿಸಿದರು.