ಪುಸ್ತಕಕ್ಕಾಗಿ ‘ತಮಿಳು’ ಕನ್ನಡಾಭಿಮಾನಿಯ ವರ್ಷಪೂರ್ತಿ ಸಂಚಾರ!

| N/A | Published : Nov 02 2025, 03:00 AM IST / Updated: Nov 02 2025, 12:29 PM IST

Kannada
ಪುಸ್ತಕಕ್ಕಾಗಿ ‘ತಮಿಳು’ ಕನ್ನಡಾಭಿಮಾನಿಯ ವರ್ಷಪೂರ್ತಿ ಸಂಚಾರ!
Share this Article
  • FB
  • TW
  • Linkdin
  • Email

ಸಾರಾಂಶ

 ರಾಜ್ಯೋತ್ಸವ ಸಡಗರದ ಈ ವೇಳೆ ತಮಿಳು ಮೂಲದ ಯುವಕನಲ್ಲಿ ಕನ್ನಡದ ಉತ್ಸಾಹ ಬತ್ತಿಲ್ಲ. ಆನ್‌ಲೈನ್‌ ಪುಸ್ತಕ ಖರೀದಿ, ಬುಕ್‌ ಸ್ಟಾಲ್‌ಗಳ ಭರಾಟೆಯ ಇಂದಿನ ದಿನಗಳಲ್ಲಿ ಈ ಕನ್ನಡಾಭಿಮಾನಿ ಶಾಲೆಗಳಿಗೆ ಸಂಚರಿಸಿ, ಸಮಾರಂಭಗಳಿಗೆ ಹಾಜರಾಗಿ ಕನ್ನಡ ಪುಸ್ತಕ ಮಾರಾಟದ ಕಾಯಕವನ್ನು ವರ್ಷಪೂರ್ತಿ ಮಾಡುತ್ತಿದ್ದಾರೆ.

ಆತ್ಮಭೂಷಣ್‌

  ಮಂಗಳೂರು :  ಕನ್ನಡ ರಾಜ್ಯೋತ್ಸವ ಸಡಗರದ ಈ ವೇಳೆ ತಮಿಳು ಮೂಲದ ಯುವಕನಲ್ಲಿ ಕನ್ನಡದ ಉತ್ಸಾಹ ಬತ್ತಿಲ್ಲ. ಆನ್‌ಲೈನ್‌ ಪುಸ್ತಕ ಖರೀದಿ, ಬುಕ್‌ ಸ್ಟಾಲ್‌ಗಳ ಭರಾಟೆಯ ಇಂದಿನ ದಿನಗಳಲ್ಲಿ ಈ ಕನ್ನಡಾಭಿಮಾನಿ ಯುವಕ ಶಾಲೆಗಳಿಗೆ ಸಂಚರಿಸಿ, ಸಾರ್ವಜನಿಕ ಸಮಾರಂಭಗಳಿಗೆ ಹಾಜರಾಗಿ ಕನ್ನಡ ಪುಸ್ತಕ ಮಾರಾಟದ ಕಾಯಕವನ್ನು ವರ್ಷಪೂರ್ತಿ ಮಾಡುತ್ತಿದ್ದಾರೆ.

ಶ್ರೀಲಂಕಾದಿಂದ ತಮಿಳು ನಿರಾಶ್ರಿತರಾಗಿ ಕರ್ನಾಟಕಕ್ಕೆ ಬಂದು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳದಲ್ಲಿ ನೆಲೆಸಿದ್ದಾರೆ ಕನ್ನಡ ಪುಸ್ತಕ ಮಾರಾಟದ ಪ್ರೇಮಿ ರವಿಚಂದ್ರ. ಇವರ ತಂದೆ, ತಾಯಿ ಇಲ್ಲಿಗೆ ನಿರಾಶ್ರಿತರಾಗಿ ಬಂದು ರಬ್ಬರ್‌ ಕೂಲಿ ಕಾರ್ಮಿಕರಾಗಿ ದುಡಿದವರು. ಮರ್ಧಾಳದಲ್ಲಿ ಜನಿಸಿದ ರವಿಚಂದ್ರ ಅವರು ಕುಕ್ಕೆ ಸುಬ್ರಹ್ಮಣ್ಯ ಕಾಲೇಜಿನಲ್ಲಿ 1999ರಲ್ಲಿ ಬಿಕಾಂ ಪದವಿ ಪೂರೈಸಿ ಗೃಹಸ್ಥರಾಗಿದ್ದಾರೆ. ಮಗುವನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಿದ್ದಾರೆ. ಕಳೆದ 11 ವರ್ಷಗಳಿಂದ ಕನ್ನಡ ಪುಸ್ತಕ ಮಾರಾಟ ಮಾಡುತ್ತಿದ್ದು, ಅದನ್ನೇ ವೃತ್ತಿ ಮತ್ತು ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ.

ತಮಿಳನ ಕನ್ನಡ ಪ್ರೇಮ!:

ರವಿಚಂದ್ರಗೆ ಕನ್ನಡ ಭಾಷೆ, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಲು ಕಾರಣ ಪಿಯುಸಿಯಲ್ಲಿ ಲಂಬೋದರ ಹಾಗೂ ಪದವಿಯಲ್ಲಿ ಗೋವಿಂದ ಎನ್‌.ಎಸ್‌. ಉಪನ್ಯಾಸಕರು. ಕಲಿಕೆಯ ನಂತರ ಖಾಸಗಿ ಉದ್ಯೋಗ ಮಾಡಿಕೊಂಡಿದ್ದ ರವಿಚಂದ್ರ ಬಳಿಕ ಇಳಿದದ್ದು ನೇರ ಕನ್ನಡ ಪುಸ್ತಕ ಮಾರಾಟಕ್ಕೆ. ಕೊರೋನಾ ಅವಧಿಯಲ್ಲಿ ಎರಡು ವರ್ಷ ಕೂಲಿ ಕೆಲಸ ಮಾಡುತ್ತಿದ್ದ ರವಿಚಂದ್ರ ಮತ್ತೆ ಹಿಂತಿರುಗಿ ನೋಡಿಲ್ಲ, ಹಗಲು ದ್ವಿಚಕ್ರ ವಾಹನದಲ್ಲಿ ಹೊರಟರೆ, ಮತ್ತೆ ವಾಪಸ್‌ ಬರುವುದು ಸಂಪಾದನೆಯೊಂದಿಗೆ ಸಂಜೆಯೇ. ದೂರದ ಊರುಗಳಿಗೆ ಬಸ್‌ನಲ್ಲಿ ಸಂಚಾರ.

ಬೈಕ್‌ನಲ್ಲಿ ತೆರಳುವಾಗ ಬ್ಯಾಗ್‌ ತುಂಬ ಪುಸ್ತಕ, ನೈಲಾನ್‌ ಹಗ್ಗದ ಮಂಚ ಮಡಚಿಕೊಂಡು ತೆರಳುತ್ತಾರೆ. ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ ಪುಸ್ತಕ ಮಾರಾಟ ಮಾಡುತ್ತಾರೆ. ಹೆಚ್ಚಿನ ಪುಸ್ತಕ ಮಾರಾಟವಾದರೆ, ಜೀವನಕ್ಕೆ ಸ್ವಲ್ಪ ಆದಾಯ ಸಿಗುತ್ತದೆ, ಇಲ್ಲವಾದರೆ ಇಲ್ಲ.

ಮಳೆಗಾಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಮಕ್ಕಳಿಗೆ ಉಪಯುಕ್ತವಾಗುವ ಪುರಾಣ, ಇತಿಹಾಸ ಪುರುಷರ ಕಥೆಗಳ ಪುಸ್ತಕ, ಸಂಸ್ಕೃತಿ ಹಾಗೂ ಅಧ್ಯಾತ್ಮಿಕ ಬೋಧನೆ ಸೇರಿದಂತೆ ವಿವಿಧ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ. ಅಲ್ಲದೆ ಜೀವನ ಮೌಲ್ಯಗಳ ಬಗ್ಗೆಯೂ ಶಾಲೆಗಳಲ್ಲಿ ಬೋಧನೆ ಮಾಡುತ್ತಾರೆ. ಚಿಂತನಾ ಲೇಖನಗಳನ್ನೂ ಮಂಗಳ ವಾರಪತ್ರಿಕೆ, ಶಕ್ತಿ ಪತ್ರಿಕೆಗಳಿಗೆ ಬರೆದಿದ್ದಾರೆ.ಬಾಕ್ಸ್‌---

ಪುಸ್ತಕ ಮಾರಾಟದಲ್ಲಿ ಮನೆ ಖರೀದಿ!

ಪುಸ್ತಕ ಮಾರಾಟ ಮಾಡಿದ ಆದಾಯದಿಂದಲೇ ರವಿಚಂದ್ರ ಅವರು ಮರ್ಧಾಳದ ಬೊಳ್ಳೂರು ಎಂಬಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ. ಅಪೂರ್ಣಗೊಂಡಿದ್ದ ಮನೆಗೆ ಮಣ್ಣಿನ ಗೋಡೆಯ ಲೇಪನ ಮಾಡಿ ಪೂರ್ಣಗೊಳಿಸಿದ್ದಾರೆ. ಏಳು ಸೆಂಟ್ಸ್‌ ಜಾಗದಲ್ಲಿ ಪುಟ್ಟ ಕೃಷಿ ಬಿಟ್ಟರೆ, ಪತ್ನಿ ಅಂಗಡಿ ಕೆಲಸಕ್ಕೆ ಹೋಗುತ್ತಾರೆ. ಪುತ್ರ ಶಾಲೆಗೆ, ಸಂಸಾರ ಸಾಗಿಸುವ ನೊಗ ಪತಿ ಮತ್ತು ಪತ್ನಿಯ ಮೇಲಿದೆ. ಕಡಬದಲ್ಲಿ ಈಗ ಸಣ್ಣ ಗೂಡಂಗಡಿಯನ್ನು ಖರೀದಿಸಿದ್ದು, ಅಲ್ಲಿ ಪುಸ್ತಕ ವ್ಯಾಪಾರ ನಡೆಸಲು ಉದ್ದೇಶಿಸಿದ್ದಾರೆ. ಇದರಲ್ಲೇ ಸಾರ್ಥಕ ಜೀವನ ಕಂಡುಕೊಂಡಿದ್ದಾರೆ.

ಕನ್ನಡಕ್ಕೆ ನನ್ನ ಮೊದಲ ಆದ್ಯತೆ, ನಂತರ ನನ್ನ ಮಾತೃ ಭಾಷೆ ತಮಿಳಿಗೆ. ಈಗ ಜನರಿಗೆ ಪುಸ್ತಕ ಖರೀದಿಯ ಆಸಕ್ತಿ ತುಂಬಾ ಕಡಿಮೆಯಾಗಿದೆ. ಪುಸ್ತಕದ ಬಗ್ಗೆ ತಾತ್ಸಾರ ಭಾವನೆ ಕೂಡದು. ಈಗಲೂ ಪುಸ್ತಕಗಳಿಗೆ ಶೇ.25ರಷ್ಟು ಮಾರುಕಟ್ಟೆ ಇದೆ. ಇದು ಓದುಗರು ಇನ್ನೂ ಜೀವಂತ ಇದ್ದಾರೆ, ಸತ್ತಿಲ್ಲ ಎಂಬುದರ ದ್ಯೋತಕ. ಪುಸ್ತಕ ಖರೀದಿಸಿ ಓದುವಂತೆ ಸರ್ಕಾರವೇ ಸಮಾಜಕ್ಕೆ ತಿಳಿವಳಿಕೆ ನೀಡಬೇಕು.

-ರವಿಚಂದ್ರ, ಪುಸ್ತಕ ಮಾರಾಟಗಾರ, ಕಡಬ

Read more Articles on