ಮೂಡುಬಿದಿರೆ: ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಶುಭಾಶಯ ಜೈನ್ ವಿರಚಿತ ಪ್ರಥಮ ‘ಹೇಮಾದ್ರಿ ಗಿರಿಬಾಲೆ’ ಯಕ್ಷಗಾನ ಪ್ರಸಂಗವು ಆ.16ರಂದು ಕುಂದಾಪುರದ ಹಂಗಾರಕಟ್ಟೆ ಕೇಂದ್ರದ ಸಭಾಭವನದಲ್ಲಿ ಪ್ರದರ್ಶನಗೊಂಡಿತು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್, ವಂಡಾರು ಆಯೋಜಿಸಿದ್ದ ಕಾರ್ಯಕ್ರಮ ಸಂಜೆ 3 ಗಂಟೆಗೆ ನಡೆಯಿತು. ಗಂಧರ್ವರ ನಡುವೆ ಜನ್ಮಾಂತರಗಳಲ್ಲಿ ನಡೆಯುವ ದ್ವೇಷ, ಪ್ರೀತಿ, ಶಾಪ, ವರ, ಒಳ್ಳೆಯತನ ಹಾಗೂ ಧರ್ಮದ ವಿಜಯದ ವಿವಿಧ ದೃಶ್ಯಗಳು ಪ್ರಸಂಗದಲ್ಲಿ ಮೂಡಿಬಂದವು.
ಲಲಿತಾಂಗನ ಅವಳಿ ಪಾತ್ರಗಳಲ್ಲಿ ಪ್ರಸನ್ನ ಶೆಟ್ಟಿಗಾರ ಮಂದಾರ್ತಿ ಹಾಗೂ ಪ್ರಕಾಶ್ ಕಿರಾಡಿ ಅಭಿನಯಿಸಿದರು. ಶಾಲ್ಮಲಿ, ಮಲಯ ಸುಂದರಿ ಹಾಗೂ ಜಯಂತಸೇನೆ ಎಂಬ ಮೂರು ಪಾತ್ರಗಳಲ್ಲಿ ವಂಡಾರು ಗೋವಿಂದ ಅಭಿನಯಿಸಿ, ಮೂರು ಜನ್ಮಗಳ ಪ್ರೀತಿ, ಸಂಘರ್ಷ ಮತ್ತು ಸೇಡಿನ ಎಳೆಯನ್ನು ವಿವಿಧ ರಸಭಾವಗಳಲ್ಲಿ ಪ್ರಸ್ತುತಪಡಿಸಿದರು.ಹೇಮಕೀರ್ತಿಯ ಪಾತ್ರದಲ್ಲಿ ಪ್ರಭಾಕರ ಬೇಳಂಜೆ, ಸುದಂತಿಯ ಪಾತ್ರದಲ್ಲಿ ಜಯಂತ ಸುರ್ಗೊಳಿ ಹಾಗೂ ಹಾಸ್ಯಗಾರ ಲಲಿತಾಂಗನ ಸಖ ಕುಸುಮನಾಗಿ ಕ್ಯಾದಗಿ ಮಹಬಲೇಶ್ವರ ಅಭಿನಯಿಸಿದರು.
ಶಾಲ್ಮಲಿ ಹಾಗೂ ಶ್ರೀನಂದರ ಪ್ರೇಮಾನುರಾಗವನ್ನು ಬೇರ್ಪಡಿಸಲು ಸುದಂತಿ ನಡೆಸುವ ಕುತಂತ್ರಗಳು ಪ್ರಸಂಗದ ಪ್ರಮುಖ ಕಥಾ ಎಳೆಯಾಗಿವೆ. ಪ್ರತಿ ಜನ್ಮದಲ್ಲೂ ಶ್ರೀನಂದ ಮತ್ತು ಶಾಲ್ಮಲಿಯನ್ನು ಕಾಡುವ ಹಗೆಯ ಪಣಕ್ಕೆ ಸವಾಲೆಸೆದು, ಶಾಲ್ಮಲಿ ಹಾಗೂ ಶ್ರೀನಂದರ ಪ್ರೀತಿಯನ್ನು ಹೇಮಕೀರ್ತಿ ಗೆಲ್ಲಿಸುತ್ತಾನೆ. ಅವರಿಬ್ಬರ ಆದರ್ಶ ಪ್ರೇಮವನ್ನು ಲೋಕಮುಖದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುವ ಹೇಮಕೀರ್ತಿ, ಅವರನ್ನು ಒಂದುಗೂಡಿಸಿ ನಿಷ್ಕಲ್ಮಷ ಪ್ರೇಮದ ಗೆಲುವಿಗೆ ಕಾರಣನಾಗುತ್ತಾನೆ.ಭಾಗವತರಾದ ಮೂಡುಬೆಳ್ಳೆ ಚಂದ್ರಕಾಂತ ರಾವ್ ಅವರ ಸಾರಥ್ಯದಲ್ಲಿ ಆಖ್ಯಾನ ನಡೆಯಿತು. ಹಿಮ್ಮೇಳದಲ್ಲಿ ಚೆಂಡೆಯಲ್ಲಿ ಎನ್. ಜಿ. ಹೆಗಡೆ ಹಾಗೂ ಮದ್ದಳೆಯಲ್ಲಿ ಮಂಗೇಶ್ ನಾಡಕರ್ಣಿ ಸಹಕರಿಸಿದರು. ಕಾರ್ಯಕ್ರಮದ ಪ್ರದರ್ಶನಕ್ಕೆ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ರಾಜಶೇಖರ ಹೆಬ್ಬಾರ್ ವೇದಿಕೆ ಒದಗಿಸಿ ಸಹಕರಿಸಿದರು.