ವಿಜಯಪುರ: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ.

ವಿಜಯಪುರ : ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ.

ಭ್ರಷ್ಟಾಚಾರ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ

ಬಿಜೆಪಿ ನಗರ ಘಟಕ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಶೆಟ್ಟಿ ಮಾತನಾಡಿ, ಸಿದ್ದರಾಮಯ್ಯನವರ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಮತ್ತೆ ಹೊರಳಿ ಅವರನ್ನೇ ಮಂತ್ರಿ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲೆಯ ಬರಗಾಲ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಬರಗಾಲ ವೀಕ್ಷಣೆಯನ್ನು ಬರಿ ಕಾಟಾಚಾರಕ್ಕೆ ವೀಕ್ಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮದಲ್ಲಿನ ಹಣ ಭ್ರಷ್ಟಾಚಾರ

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಎಸ್.ಸಿ ಮತ್ತು ಎಸ್.ಟಿ. ಜನಾಂಗದ ಅಭಿವೃದ್ಧಿಗೆ ಇಟ್ಟ ವಾಲ್ಮೀಕಿ ನಿಗಮದಲ್ಲಿನ ಹಣ ಭ್ರಷ್ಟಾಚಾರವಾಗಿದ್ದನ್ನು ಅಂದಿನ ಸಿಎಂ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದು, ಅಂತಹ ಕಳಂಕಿತ ಶಾಸಕ ಬಿ.ನಾಗೇಂದ್ರರನ್ನು ಮಂತ್ರಿಯನ್ನಾಗಿ ಮಾಡಿರುವುದು ಸಂವಿಧಾನಬದ್ಧವಲ್ಲ ಎಂದು ಆರೋಪಿಸಿದರು.

ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ರವೀಂದ್ರ ಲೋಣಿ, ಉಮೇಶ ವಂದಾಲ ಮಾತನಾಡಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ, ಮಹಾಪೌರರಾದ ಎಂ.ಎಸ್.ಕರಡಿ, ಉಪ ಮಹಾಪೌರರಾದ ಸುಮಿತ್ರಾ ಜಾಧವ, ವಿವೇಕಾನಂದ ಡಬ್ಬಿ, ಮಳುಗೌಡ ಪಾಟೀಲ, ಕೃಷ್ಣ ಗುನ್ಹಾಳಕರ, ಭೀಮಾಶಂಕರ ಹದನೂರ, ವಿಜಯ ಜೋಶಿ, ಸ್ವಪ್ನಾ ಕಣಮುಚನಾಳ, ಶ್ರೀಕಾಂತ ಶಿಂಧೆ, ರಾಹುಲ ಜಾಧವ, ಸುರೇಶ ಬಿರಾದಾರ, ಮಹೇಂದ್ರ ನಾಯಕ, ವಿಕಾಸ ಪದಕಿ, ರಾಜು ಬಿರಾದಾರ ಇದ್ದರು.