ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಚಡಚಣದಿಂದ ಕಲಬುರಗಿ ಜಿಲ್ಲೆಯ ಗಾಣಗಾಪುರದವರೆಗಿನ ರಾಜ್ಯ ಹೆದ್ದಾರಿ ಕಾಮಗಾರಿ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಮಂತ್ರಾಲಯ ಹಾಗೂ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ವತಿಯಿಂದ ವಿವಿಧ ಹಂತಗಳಲ್ಲಿ ತಿರುವಳಿಯ ಅವಶ್ಯಕತೆ ಇರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ವಿಳಂಬವಾಗಿದೆ.

ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ ಅಂತಿಮ ಅನುಮೋದನೆ ಹಾಗೂ ಆರ್ಥಿಕ ಇಲಾಖೆಯ ಸಹಮತಿ ದೊರೆತ ನಂತರ ಸಚಿವ ಸಂಪುಟದ ಅನುಮೋದನೆ ಪಡೆದು 119.50 ಕಿ.ಮೀ ಉದ್ದದ ರಸ್ತೆ ಕಾಮಗಾರಿಗೆ ಟೆಂಡ‌ರ್ ಆಹ್ವಾನಿಸಿ ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ರಾಜ್ಯ ಹೆದ್ದಾರಿ ವಿಳಂಬ ಕುರಿತು ವಿಧಾನಸಭೆ ಕಲಾಪದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2025-26ನೇ ಸಾಲಿನ ಆಯವ್ಯಯದಲ್ಲಿ ಕೆಶಿಪ್ ಯೋಜನೆಯಡಿ ವಿಜಯಪುರ ಜಿಲ್ಲೆಯ ಚಡಚಣದಿಂದ ಕಲಬುರಗಿ ಜಿಲ್ಲೆಯ ಗಾಣಗಾಪುರದವರೆಗೆ ರಸ್ತೆ ಅಭಿವೃದ್ಧಿಪಡಿಸುವುದಾಗಿ ಘೋಷಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಾಥಮಿಕ ಯೋಜನಾ ವರದಿಗಳನ್ನು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಮೂಲಕ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಮಂತ್ರಾಲಯಕ್ಕೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿ ಪ್ರಸ್ತಾವನೆಯನ್ನು 24-02-2025 ರಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿಗೆ ಕಳುಹಿಸಲಾಗಿದೆ. ಪ್ರಸ್ತುತ, ಪ್ರಸ್ತಾವನೆಗೆ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಅನುಮೋದನೆ ನಿರೀಕ್ಷೆಯಲ್ಲಿದ್ದು, ಶೀಘ್ರ ಅನುಮೋದನೆ ದೊರೆಯುವ ನಿರೀಕ್ಷೆ ಇದ್ದು, ಅನುಮೋದನೆ ಸಿಕ್ಕ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.

ಪಿಡಬ್ಲುಡಿ ಜಾಗ ಹಸ್ತಾಂತರಕ್ಕೆ ಅನುಮೋದನೆ: ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಸರ್ವೇ ನಂ-473 /1ರಲ್ಲಿ 1 ಎಕರೆ 29 ಗುಂಟೆ ಜಮೀನು ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಆಲಮಟ್ಟಿಯ ಕೆಬಿಜೆಎನ್‌ಎಲ್‌ನವರಿಂದ ಇಷ್ಟೇ ವಿಸ್ತೀರ್ಣದಷ್ಟು ಬದಲಿ ನಿವೇಶನ ಪಡೆದು ಜಾಗ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಶಾಸಕ ಮತ್ತೊಂದು ಪ್ರಶ್ನೆಗೆ ಸಚಿವ ಜಾರಕಿಹೊಳಿ ಉತ್ತರ ನೀಡಿದ್ದಾರೆ


ರಾಮತೀರ್ಥ ಎಲ್.ಟಿಗೆ ಕುಡಿಯುವ ನೀರಿಗಾಗಿ ₹65.12 ಲಕ್ಷ:ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ರಾಮತೀರ್ಥ ಎಲ್.ಟಿ. ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ರಾಜನಾಳ ಕೆರೆಯ ವ್ಯಾಪ್ತಿಯಲ್ಲಿರುವ ತೆರೆದ ಬಾವಿಗೆ ಪ್ರಸ್ತಾವನೆಸಲ್ಲಿಸಲಾಗಿದ್ದು, ಅನುಮೋದನೆಗಾಗಿ ಕಾರ್ಯಪಾಲಕ ಎಂಜಿನಿಯರ್‌ ಅವರಿಂದ ಗ್ರಾ.ಕು.ನೀ ಮತ್ತು ನೈರ್ಮಲ್ಯ ಇಲಾಖೆಗೆ ಜೆಜೆಎಂ ಅಡಿ ಕೊಗೊಂಡ ಕಾಮಗಾರಿ ಹಾಗೂ ಪ್ರಸ್ತುತ ಸ್ಥಿತಿಯ ಕುರಿತು ತಾಂತ್ರಿಕವಾಗಿ ವಿವರವಾದ ವರದಿಯನ್ನು ಅಧಿಕ್ಷಕ ಅಭಿಯಂತರರಿಗೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಯೋಜನೆ ಕುರಿತು ಶಾಸಕರು ಸದನದಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಪ್ರಾದೇಶಿಕ ಅಸಮಾನತೆ ನಿವಾರಿಸಲು ಕ್ರಮ:ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಪ್ರದೇಶಗಳು ಸಮಾನಾಂತರವಾಗಿ ಅಭಿವೃದ್ಧಿ ಹೊಂದಲು ಹಾಗೂ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಇಲಾಖೆ ಸಚಿವ ಬಿ.ನಾಗೇಂದ್ರ ಅವರು, ಪ್ರಾದೇಶಿಕ ಅಸಮತೋಲನ ನಿವಾರಿಸಲು ಪ್ರಸ್ತುತ ಡಾ.ಡಿ.ಎಂ. ನಂಜುಂಡಪ್ಪರವರ ವರದಿ ಸೂಚ್ಯಂಕ 22 ವರ್ಷಗಳು ಹಳೆಯದಾಗಿರುವುದರಿಂದ ಹೊಸ ಸೂಚ್ಯಂಕ ಕಂಡುಹಿಡಿಯಲು ಪ್ರೊ.ಎಂ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ 2024ರ ಮಾರ್ಚ್‌ 16ರಂದು ಸಮಿತಿ ರಚಿಸಿದ್ದು, ಈ ಸಮಿತಿ 31.1.2026ರಂದು ವರದಿ ಸಲ್ಲಿಸಿದ್ದು, 2026ರ ಫೆಬ್ರವರಿ 26ರಂದು ಸಚಿವ ಸಂಪುಟವು ಅಂಗೀಕರಿಸಿ ಅನುಮೋದನೆ ನೀಡಿದ್ದು ಮಾರ್ಚ್‌ 18ರಂದು ವಿಧಾನ ಮಂಡಲದಲ್ಲಿ ಮಂಡಿಸಲಾಗಿದೆ. ವರದಿ ಆಧರಿಸಿ ಆಡಳಿತ ಇಲಾಖೆಯು 14 ಇಲಾಖೆಗಳಿಗೆ ₹4291.49 ಕೋಟಿ ಹಂಚಿಕೆ ಮಾಡಿದ್ದು, ಪ್ರೊ. ಎಂ.ಗೋವಿಂದರಾವ್ ಸಮಿತಿಯ ವರದಿಯ ಶಿಫಾರಸ್ಸುಗಳಂತೆ ಹಾಗೂ ಅನುದಾನ ಹಂಚಿಕೆಯ ಅನುಪಾತ ಅನುಸರಿಸಿ ಕ್ರಿಯಾಯೋಜನೆ ರೂಪಿಸುವ ಬಗ್ಗೆ ಜುಲೈ 3ರಂದು ಅಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ವಿವಿಧ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಲು ಕ್ರಮವಹಿಸಲಾಗಿದೆ ಉತ್ತರಿಸಿದ್ದಾರೆ.