ಕನ್ನಡಪ್ರಭ ವಾರ್ತೆ ವಿಜಯಪುರ
ಶೋಷಿತ, ದಮನಿತ ಹಾಗೂ ದೀನ-ದಲಿತ ಸಮುದಾಯಗಳ ಸಮಗ್ರ ಏಳಿಗೆಗಾಗಿ ಡಿ.ದೇವರಾಜ ಅರಸು ಅವರು ರೂಪಿಸಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಹೇಳಿದರುಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಡಿ. ದೇವರಾಜ ಅರಸು ಅವರು ಕರ್ನಾಟಕ ಕಂಡ ಅತ್ಯಂತ ಧೀಮಂತ, ದೂರದೃಷ್ಟಿಯ ರಾಜಕಾರಣಿ. ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದರು ಎಂದು ಬಣ್ಣಿಸಿದರು. ಯುವಜನತೆಗೆ ಶೈಕ್ಷಣಿಕ ಅರಿವು ಮೂಡಿಸುವುದು ಹಾಗೂ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಅವರ ಸಾಮಾಜಿಕ ಬದ್ಧತೆ ಎದ್ದು ಕಾಣುತ್ತದೆ. ಇಂತಹ ಮಹಾನ್ ಚಿಂತಕರ ತತ್ವಾದರ್ಶ ಹಾಗೂ ಸಾಮಾಜಿಕ ಕಾಳಜಿಯನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಅರಸು ಅವರು ಸಮಾಜದ ಹಿಂದುಳಿದವರಿಗೆ ಸಾಮಾಜಿಕವಾಗಿ ನ್ಯಾಯ ದೊರಕಿಸಿಕೊಡುವಲ್ಲಿ ಅಭೂತಪೂರ್ವ ಸುಧಾರಣೆ ತಂದರು. ಜೀತಪದ್ಧತಿಯಂತಹ ಅಮಾನವೀಯ ಆಚರಣೆಗಳನ್ನು ಕಾನೂನುಬದ್ಧವಾಗಿ ತೊಡೆದುಹಾಕಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಸತಿ ನಿಲಯಗಳನ್ನು ಸ್ಥಾಪಿಸಿದರು. ಇಂದಿಗೂ ಸರ್ಕಾರದ ಈ ಸೌಲಭ್ಯಗಳನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಅರಸು ಅವರ ತತ್ವ-ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಣಮಂತ ಬಿ. ಪೂಜಾರಿ ಉಪನ್ಯಾಸ ನೀಡಿ, ಉಳ್ಳವರಿಂದ ಭೂಮಿ ಪಡೆದು ಭೂರಹಿತ ಬಡವರಿಗೆ ಹಂಚುವಲ್ಲಿ ಅರಸು ಅವರು ತೋರಿದ ಧೈರ್ಯ ಮತ್ತು ಪರಿಶ್ರಮ ಅವರ ಚಿಂತನೆಗಳನ್ನು ಸಾರ್ವಕಾಲಿಕವಾಗಿಸಿದೆ ಎಂದು ಬಣ್ಣಿಸಿದರು.
ಡಿ.ದೇವರಾಜ ಅರಸು ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಮಾಜದ ಹಿಂದುಳಿದ ವರ್ಗಗಳು, ಬಡವರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕರು. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡು, ಸಮಾಜದ ದುರ್ಬಲ ವರ್ಗಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು ಎಂದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಸನ್ಮಾನಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.ಭಾವಚಿತ್ರ ಮೆರವಣಿಗೆ: ಸಮಾರಂಭಕ್ಕೂ ಮುನ್ನ ಬೆಳಗ್ಗೆ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭವ್ಯ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಯಿತು.
ವಿವಿಧ ಜಾನಪದ ಕಲಾತಂಡಗಳ ಕಲಾ ವೈಭವದೊಂದಿಗೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಸಾಗಿದ ಮೆರವಣಿಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಯಶಸ್ವಿಯಾಗಿ ಸಮಾವೇಶಗೊಂಡಿತು.ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಡಿಎಸ್‌ಪಿ ಎಂ.ಎ. ಉಪಾಸೆ, ಜಿಲ್ಲಾ ಖಜಾನಾಧಿಕಾರಿ ಆನಂದ ಮುಚ್ಚಂಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಣಮಂತ ಕಾಲತಿಪ್ಪಿ ಸೇರಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ದೇವರಾಜ ಅರಸು ಅಭಿಮಾನಿಗಳ ಬಳಗದ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಊಳುವವನೇ ಭೂ ಒಡೆಯ ಎಂಬ ಐತಿಹಾಸಿಕ ಭೂಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಅನೇಕ ಭೂರಹಿತ ಗೇಣಿದಾರರಿಗೆ ಜಮೀನಿನ ಹಕ್ಕು ದೊರಕಿಸಿಕೊಟ್ಟು, ಸಮಾಜದಲ್ಲಿ ನೆಲೆಸಿದ್ದ ಅಸಮಾನತೆ ಕೊನೆಗಾಣಿಸಿ ಆರ್ಥಿಕ ಸಮಾನತೆ ತರಲು ಶ್ರಮಿಸಿದರು. ಆ ಕಾಲದಲ್ಲೇ ಅವರು ಆರಂಭಿಸಿದ ಸ್ಟೈಪಂಡರಿ ಹಾಗೂ ಶೈಕ್ಷಣಿಕ ನೆರವಿನ ಯೋಜನೆಗಳು, ವಿದ್ಯಾರ್ಥಿವೇತನ ಯೋಜನೆಗಳಿಗೆ ಬಲವಾದ ತಳಪಾಯವಾಗಿವೆ.- ಡಾ.ಆನಂದ ಕೆ. ಜಿಲ್ಲಾಧಿಕಾರಿ