ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಲಿಂಗದೀಕ್ಷೆ ಕೇವಲ ಧಾರ್ಮಿಕ ವಿಧಿವಿಧಾನವಲ್ಲ. ಅದು ಭಕ್ತನ ಆಧ್ಯಾತ್ಮಿಕ ಬದುಕಿಗೆ ಹೊಸ ದಾರಿ ತೋರಿಸುವ ಸಂಸ್ಕಾರವಾಗಿದೆ. ಇಷ್ಟಲಿಂಗ ಧರಿಸುವ ಮೂಲಕ ಶಿವತತ್ತ್ವವನ್ನು ಅಂತರಂಗದಲ್ಲಿ ಪ್ರತಿಷ್ಠಾಪಿಸಿಕೊಂಡು, ನಿತ್ಯ ಲಿಂಗಪೂಜೆ, ಜಪ, ಧ್ಯಾನ ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪವನ್ನು ದೀಕ್ಷಿತರು ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.ಶ್ರೀಶೈಲ ಕ್ಷೇತ್ರದಲ್ಲಿ ಗುರುವಾರ ಬೆಳಗ್ಗೆ ಶ್ರಾವಣ ಮಾಸದ ನಿಮಿತ್ತ ಜರುಗುತ್ತಿರುವ ಇಷ್ಟಲಿಂಗ ಮಹಾಪೂಜೆ ಸಮಾರಂಭದಲ್ಲಿ 100ಕ್ಕೂ ಅಧಿಕ ಜಂಗಮ ವಟುಗಳಿಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಕಾರ್ಯಕ್ರಮಲ್ಲಿ ಜಗದ್ಗುರುಗಳು ಸಾನ್ನಿಧ್ಯ ವಹಿಸಿ ದೀಕ್ಷಿತರನ್ನು ಆಶೀರ್ವದಿಸಿದರು.
ವೀರಶೈವ ಧಾರ್ಮಿಕ ಪರಂಪರೆಯಲ್ಲಿ ಲಿಂಗದೀಕ್ಷೆ ಹಾಗೂ ಅಯ್ಯಾಚಾರಕ್ಕೆ ವಿಶೇಷ ಮಹತ್ವವಿದೆ. ಲಿಂಗದೀಕ್ಷೆಯ ಮೂಲಕ ಇಷ್ಟಲಿಂಗವನ್ನು ಧರಿಸಿ ನಿತ್ಯ ಪೂಜೆ ಹಾಗೂ ಆಧ್ಯಾತ್ಮಿಕ ಸಾಧನೆಯ ಸಂಕಲ್ಪ ಕೈಗೊಳ್ಳಬೇಕು. ಅಯ್ಯಾಚಾರವು ದೀಕ್ಷೆಯೊಂದಿಗೆ ಜೀವನದಲ್ಲಿ ಧಾರ್ಮಿಕ ಆಚರಣೆ, ಶಿಸ್ತು, ಸಾತ್ವಿಕತೆ ಹಾಗೂ ಸದಾಚಾರವನ್ನು ಪಾಲಿಸುವ ಸಂಕಲ್ಪವಾಗಿದೆ ಎಂದು ಜಗದ್ಗುರುಗಳು ತಿಳಿಸಿದರು.ಜೈನಾಪುರದ ರೇಣುಕ ಶಿವಾಚಾರ್ಯ ಶ್ರೀಗಳು ಮಾತನಾಡಿ, ಅಯ್ಯಾಚಾರವು ದೀಕ್ಷಿತ ವ್ಯಕ್ತಿಯ ಜೀವನದಲ್ಲಿ ಸದಾಚಾರ, ಶುದ್ಧತೆ, ನಿಯಮ, ಕಾಯಕ ಮತ್ತು ದಾಸೋಹದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ವೈಯಕ್ತಿಕ ಜೀವನದ ಜತೆಗೆ ಸಮಾಜದ ಒಳಿತಿಗಾಗಿ ಶ್ರಮಿಸುವ ಮನೋಭಾವ ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಶ್ರೀಶೈಲದಂತಹ ಪುಣ್ಯಕ್ಷೇತ್ರದಲ್ಲಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಕಾರ್ಯಕ್ರಮವು ಜಂಗಮ ಮಟುಗಳಲ್ಲಿ ಮತ್ತು ಭಕ್ತರಲ್ಲಿ ಧಾರ್ಮಿಕ ಚೈತನ್ಯ ಮೂಡಿಸಿತು.
ಕಾರ್ಯಕ್ರಮದಲ್ಲಿ ಶ್ರೀಶೈಲ ಕ್ಷೇತ್ರದ ಸಿಇಒ ಎಂ.ಶ್ರೀನಿವಾಸ, ಜಂಗಮ ಸಮಾಜದ ಅಧ್ಯಕ್ಷ ನಟರಾಜ, ಎಂ.ಬಿ.ಹಿರೇಮಠ, ಶ್ರೀಗಳ ಸೇವಾಧಾರಿ ಗಿರೀಶ ಸಾಲಿಮಠ, ವಿಶ್ವ ಹಿರೇಮಠ, ಮುತ್ತುಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಶಾಸ್ತ್ರಿಗಳು, ಕೋಟೇಶ್ವರ ಶಾಸ್ತ್ರಿ, ಶಿವಪ್ರಸಾದ ಪ್ರಧಾನ ಅರ್ಚಕರು ಸೇರಿದಂತೆ ಅನೇಕರು ಇದ್ದರು ಎಂದು ಶ್ರೀಶೈಲ ಪೀಠದ ವಾರ್ತಾಧಿಕಾರಿ ಬಸಯ್ಯ ವಸ್ತ್ರದ ತಿಳಿಸಿದರು.