ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳಿಂದ ದೂರ ಉಳಿದಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಮಂಗಳವಾರ ನಡೆಯುವ ಬೆಂಗಳೂರು ವಿವಿ ಘಟಿಕೋತ್ಸವದಲ್ಲೂ ಪಾಲ್ಗೊಳ್ಳುತ್ತಿಲ್ಲ.ಕಳೆದ ಆರು ದಶಕಗಳಲ್ಲಿ ಬೆಂ.ವಿವಿಯ ಯಾವುದೇ ವರ್ಷದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಗೈರು ಹಾಜರಾದ ಉದಾಹರಣೆಯೇ ಇಲ್ಲ ಎನ್ನಲಾಗಿದೆ. ಆದರೆ, ಈ ಬಾರಿ ಗೈರು ಹಾಜರಾಗಲಿದ್ದಾರೆ. ಈ ಬಗ್ಗೆ ರಾಜಭವನದಿಂದ ವಿಶ್ವವಿದ್ಯಾಲಯಕ್ಕೆ ಅಧಿಕೃತ ಮಾಹಿತಿಯೂ ಬಂದಿದೆ ಎಂದು ವಿವಿಯ ಅಧಿಕಾರಿಗಳೇ ತಿಳಿಸಿದ್ದಾರೆ.
ಘಟಿಕೋತ್ಸವದ ಕುರಿತು ನಗರದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಲಪತಿ ಡಾ। ಎಸ್.ಎಂ.ಜಯಕರ ಅವರು, ಪ್ರತೀ ಬಾರಿಯಂತೆ ನಾವು ವಿವಿಯ ಕಲಾಧಿಪತಿಗಳೂ ಆದ ರಾಜ್ಯಪಾಲರನ್ನು ಭೇಟಿಯಾಗಿ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲು ಆಹ್ವಾನ ನೀಡಿದ್ದೆವು. ಆದರೆ, ಕಾರಣಾಂತರಗಳಿಂದ ಭಾಗವಹಿಸಲು ಆಗುತ್ತಿಲ್ಲ ಎಂದು ರಾಜಭವನದಿಂದ ಮಾಹಿತಿ ಬಂದಿದೆ. ಹಾಗಾಗಿ ಉನ್ನತ ಶಿಕ್ಷಣ ಸಚಿವರೇ ಅಧ್ಯಕ್ಷತೆ ವಹಿಸಿ ಘಟಿಕೋತ್ಸವ ನಡೆಸಿಕೊಡಲಿದ್ದಾರೆ ಎಂದರು.ರಾಜ್ಯದ ಎಲ್ಲ ಸಾರ್ವಜನಿಕ ವಿವಿಗಳ ಕುಲಾಧಿಪತಿಗಳಾದ ರಾಜ್ಯಪಾಲರು ಪ್ರತಿ ವಿವಿಯ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಘಟಿಕೋತ್ಸವ ಆರಂಭಿಸಲು ಹಾಗೂ ಮುಕ್ತಾಯಗೊಳಿಸಲು ವೇದಿಕೆಯಿಂದಲೇ ಸೂಚನೆ ನೀಡುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಘಟಿಕೋತ್ಸವಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಪ್ರಕರಣದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ವಿವಿಧ ಸಚಿವರು, ಕಾಂಗ್ರೆಸ್ ಮುಖಂಡರು ನಡೆಸುತ್ತಿರುವ ಹರಿತ ವಾಗ್ದಾಳಿ, ಆಕ್ರೋಶ ಹಾಗೂ ಕೆಲ ನಾಯಕರ ವಿವಾದಾತ್ಮಕ ಹೇಳಿಕೆಗಳಿಂದಾಗಿ ರಾಜ್ಯಪಾಲರ ಭದ್ರತಾ ವ್ಯವಸ್ಥೆ ಹೆಚ್ಚಳದ ಜೊತೆಗೆ ಘಟಿಕೋತ್ಸವ ಸೇರಿದಂತೆ ಸಾರ್ವಜನಿಕ ಸಭೆ, ಸಮಾರಂಭಗಳಿಂದ ದೂರ ಉಳಿದಿದ್ದಾರೆ.
ಇತ್ತೀಚೆಗೆ ನಡೆದ ನೃಪತುಂಗ ವಿವಿಯ ಪ್ರಥಮ ಘಟಿಕೋತ್ಸವ, ಬೆಂಗಳೂರು ಉತ್ತರ ವಿವಿಯ ಘಟಿಕೋತ್ಸವ, ವಿಜಯನಗರದ ಶ್ರೀ ಕೃಷ್ಣದೇವರಾಯ ವಿವಿಯ ಘಟಿಕೋತ್ಸವದಲ್ಲಿಯೂ ರಾಜ್ಯಪಾಲರು ಭಾಗಿಯಾಗಿರಲಿಲ್ಲ.