ಸಾರಾಂಶ
ಕನಕಪುರ: ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿ ದಾಂಧಲೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನಕಪುರ: ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿ ದಾಂಧಲೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಹೊಸಕೋಟೆ ಗ್ರಾಮದ ನಾಗಲಿಂಗ ಮತ್ತವರ ಮಕ್ಕಳು ಹಾಗೂ ನಗರದ ಮೇಗಳ ಬೀದಿಯ ಮಂಜ ಮತ್ತಿತರ ಹತ್ತು ಮಂದಿಯ ಗುಂಪು ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ, ತಾಮಸಂದ್ರ ಗ್ರಾಮದ ಭರತ್, ಶಶಿಕಲ, ಶ್ರೀನಿವಾಸ್, ವಿಜಯ್ ಮೇಲೆ ಮಚ್ಚು ಮತ್ತು ಲಾಂಗ್‌ಗಳಿಂದ ಹಲ್ಲೆ ಮಾಡಿ ಮನೆ ಹಾಗೂ ವಾಹನಗಳನ್ನು ಧ್ವಂಸಗೊಳಿಸಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದು ಕನಕಪುರ-ರಾಮನಗರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಡಿವೈಎಸ್‌ಪಿ ಕೆ.ಸಿ.ಗಿರಿ, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಕೆ.ಎಲ್.ಕೃಷ್ಣ ಹಾಗೂ ಮಿಥುನ್‌ಶಿಲ್ಪಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಘಟನೆಗೆ ಸಂಬಂಧಿಸಿದಂತೆ ತಾಮಸಂದ್ರ ಮಹದೇವ, ಹೊಸಕೋಟೆ ನಾಗಲಿಂಗನ ಮಕ್ಕಳಾದ ನಾಗೇಂದ್ರ, ಪ್ರಸಾದ್ ಅಲಿಯಾಸ್ ಕರಿಯಪ್ಪನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ರೌಡಿಶೀಟರ್ ಹಾಗೂ ಇಸ್ಪೀಟ್ ದಂಧೆ ನಡೆಸುವ ಮಂಜ, ಕೀರ್ತಿ ಸೇರಿದಂತೆ ಹಲವರು ಪರಾರಿಯಾಗಿದ್ದಾರೆ.ತಾಮಸಂದ್ರ ಸರ್ಕಲ್ ಸಮೀಪ ಹೊಸಕೋಟೆ ನಾಗಲಿಂಗ ಮತ್ತವರ ಮಕ್ಕಳು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವುದಲ್ಲದೆ ಸಮೀಪವಿರುವ ಕಾಡಿನಲ್ಲಿ ಅಕ್ರಮ ನಾಡ ಬಂದೂಕುಗಳಿಂದ ಬೇಟೆಯಾಡುವುದರ ಜೊತೆಗೆ ಅಕ್ರಮ ಜೂಜಾಟ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಇವರ ದುಷ್ಕೃತ್ಯದ ಬಗ್ಗೆ ಗ್ರಾಮಾಂತರ ಪೊಲೀಸರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.