ಸಾರಾಂಶ
ಕೊಟ್ಟೂರು: ಡೋಣೂರು ಚಾನುಕೋಟಿ ಮಠ ಎಂದಿಗೂ ವರ್ಗ, ವರ್ಣ ಭೇದವೆಣಿಸಿಲ್ಲ. ಎಲ್ಲರೂ ನಮ್ಮವರು ಎಂಬ ತತ್ವ ಮತ್ತು ಕಾಳಜಿಯೊಂದಿಗೆ ಮುನ್ನಡೆದುಕೊಂಡು ಬಂದಿದೆ. ಇದಕ್ಕೆ ಭಕ್ತರ ಸಹಕಾರವೇ ಕಾರಣ ಎಂದು ಡೋಣೂರು ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಚಾನುಕೋಟಿ ಮಠದ ಆಶ್ರಮದಲ್ಲಿ ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಉಚಿತ ನೇತ್ರ ಪರೀಕ್ಷೆ, ಗುಬ್ಬಿ ತೋಟದಪ್ಪ ಗ್ರಂಥಾಲಯ ಉದ್ಘಾಟನೆ, ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಚಾನುಕೋಟಿ ಮಠದ ಸದಾ ಹಿಂದುಳಿದ ಮತ್ತು ಶೋಷಿತ ವರ್ಗ ಹಾಗೂ ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡುತ್ತಾ ಬಂದಿದೆ. ಈ ಅಂಶವೇ ನಮ್ಮ ಮಠದ ತತ್ವ-ಸಿದ್ಧಾಂತವಾಗಿದೆ ಎಂದು ಹೇಳಿದರು.ಅಮೆರಿಕದಲ್ಲಿರುವ ಸ್ಮಿತಾ ಸತೀಶ ಸಾಲಂಕಿಮಠ ಅವರು ಮಠಕ್ಕೆ ನೀಡಿರುವ ದಾನವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದಲಿಂಗ ಶಿಚಾಚಾರ್ಯ ಸ್ವಾಮೀಜಿ, ಸದಾ ಸೀದಾ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಉಳ್ಳವರಾಗಿರುವುದರಿಂದ ಮಠದ ಉಚಿತ ವಸತಿ ನಿಲಯದಲ್ಲಿ ಅಧಿಕ ಸಂಖ್ಯೆಯಲ್ಲಿ ಶೋಷಿತರು, ಅಲ್ಪ ಸಂಖ್ಯಾತ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ ಎಂದರು.ಮೂರೂವರೆ ದಶಕಗಳಿಂದಲೂ ಡಾ. ಸಿದ್ದಲಿಂಗ ಶಿಚಾಚಾರ್ಯ ಸ್ವಾಮೀಜಿ, ಸಾಮೂಹಿಕ ವಿವಾಹ, ಕಣ್ಣು ಪರೀಕ್ಷೆ, ಉಚಿತ ಆರೋಗ್ಯ ತಪಾಸಣೆಯಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದು ಭಕ್ತರ ಮನಸ್ಸಲ್ಲಿ ಸದಾ ನೆಲಸಿದ್ದಾರೆ ಎಂದರು.
ಡಾ. ಮಂಜುನಾಥ, ಕೊಟ್ಟೂರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಜಿ. ಈಶ್ವರಪ್ಪ, ಬಿಆರ್‌ಸಿ ಜಿ. ರವೀಂದ್ರ ಮುಂತಾದವರಿದ್ದರು. ಆನಂತರ ಉಚಿತ ಕಣ್ಣು ಪರೀಕ್ಷೆ ನಡೆಯಿತು.ಆನಂತರ ಜೀವನ ದರ್ಶನ ಶಿಕ್ಷಣ ಸಂಸ್ಥೆ ಮತ್ತು ಎಂಆರ್‌ಐಟಿ ಕಣ್ಣಿನ ಆಸ್ಪತ್ರೆ , ಮುಂಡರಗಿ ಭಕ್ತರ ನೆರವಿನಿಂದ ನೂತನವಾಗಿ ನಿರ್ಮಿಸಿರುವ ಗುಬ್ಬಿ ತೋಟದಪ್ಪ ಗ್ರಂಥಾಲಯ, ಅಮೆರಿಕದಲ್ಲಿ ನೆಲೆಸಿರುವ ಸ್ಮಿತಾ ಸತೀಶ ಸಾಲಂಕಿಮಠ ನೀಡಿರುವ ಡೆಸ್ಕ್ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಉಚಿತ ಕಣ್ಣಿನ ಚಿಕಿತ್ಸೆ ಶಿಬಿರದಲ್ಲಿ ನೂರಾರು ಅಧಿಕ ಸಂಖ್ಯೆಯ ಜನರಿಗೆ ಉಚಿತ ನೇತ್ರಚಿಕಿತ್ಸೆಯನ್ನು ತಜ್ಞ ವೈದ್ಯರು ನಡೆಸಿದರು.