ಸಾರಾಂಶ
ಚಳ್ಳಕೆರೆ: ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯವನ್ನು ರಾಜ್ಯ ಸರ್ಕಾರಿ ನೌಕರರು ಮಾಡುವ ಮೂಲಕ ಸರ್ಕಾರಕ್ಕೆ ಗೌರವ ತಂದಿದ್ದಾರೆ. ಸರ್ಕಾರ ಯಾವುದೇ ಯೋಜನೆ ಅನುಷ್ಠಾನವಾಗಲು ಸಹಕಾರ ಮುಖ್ಯ. ಆದ್ದರಿಂದ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಸರ್ಕಾರಿ ನೌಕರರ ಭವನದ ಮೇಲ್ಭಾಗದಲ್ಲಿ ಸಂಘ ನೂತನ ಸಮುದಾಯ ಭವನದ ಶಂಕು ಸ್ಥಾಪನೆ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ, ವ್ಯಕ್ತಿ ವಿಕಸನ ಕಾರ್ಯಗಾರ ಹಾಗೂ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು.ರಾಜ್ಯ ಸರ್ಕಾರಿ ನೌಕರರ ಅಂಗಸಂಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಸಂಘದ ನೂತನ ಸಮುದಾಯ ಭವನಕ್ಕೆ ಸುಮಾರು 1 ಕೋಟಿ ರು. ವೆಚ್ಚವಾಗಲಿದ್ದು ಹಂತ, ಹಂತವಾಗಿ ಅನುದಾನದಲ್ಲೇ ನೀಡಿ ನೂತನ ಸಮುದಾಯ ಭವನದ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿ ಎಂದು ಶುಭಹಾರೈಸಿದರು.
ತಾಲೂಕು ಅಧ್ಯಕ್ಷ ಪಿ.ಎಲ್.ಲಿಂಗೇಗೌಡ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರು ಸ್ವಯಂ ಪ್ರೇರಣೆಯಿಂದ ತೊಡಗಿಕೊಂಡು ಹಲವಾರು ಅಭಿವೃದ್ದಿ ಕಾಮಗಾರಿ ಮಾಡುವ ಮೂಲಕ ಜನಮಾನಸದ ಶಾಸಕರಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಸರ್ಕಾರಿ ನೌಕರರ 3 ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗ ಜಾರಿ, ಒಪಿಎಸ್, ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರದ ಮೇಲೆ ಬೇಡಿಕೆಗಳ ಈಡೇರಿಕೆಗಾಗಿ ನೌಕರರ ಸಂಘದಿಂದ ಒತ್ತಡ ಮಾಡುವ ಮೂಲಕ ಅನೇಕ ಯೋಜನೆಗಳ ಜಾರಿಗೆ ಸಂಘ ಶ್ರಮಿಸಿದೆ. 7ನೇ ವೇತನ ಆಯೋಗ ಹಾಗೂ ಒಪಿಎಸ್ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಕುರಿತು ಸೌಹಾದರ್ಘತ ಚರ್ಚೆ ನಡೆದಿದೆ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಸರ್ಕಾರದ ಸ್ಥಿತಿಗತಿಗಳನ್ನು ನೋಡಿ ನಿರ್ಧಾರಕೈಗೊಳ್ಳಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ ಮಾತನಾಡಿ, ಶಾಸಕರು ಮುಖ್ಯಮಂತ್ರಿಗಳೊಂದಿಗೆ ವಿಶ್ವಾಸ ಹೊಂದಿದ್ದಾರೆ. ಸರ್ಕಾರಿ ನೌಕರರಿಗೆ ಅಪಾರವಾದ ವಿಶ್ವಾಸ, ಗೌರವವಿದೆ ಎಂದರು.ರಾಜ್ಯ ಖಜಾಂಚಿ ಡಾ.ಎಂ.ಸಿದ್ದರಾಮಣ್ಣ, ಹಿರಿಯ ಉಪಾಧ್ಯಕ್ಷ ಎಂ.ವಿ.ರುದ್ರಪ್ಪ, ಎಸ್.ಬಸವರಾಜು, ಡಿಡಿಪಿಐ ಕೆ.ರವಿಶಂಕರರೆಡ್ಡಿ, ತಹಸೀಲ್ದಾರ್ ರೇಹಾನ್‌ಪಾಷ, ಇಒ ಎಚ್.ಶಶಿಧರ, ಬಿಇಒ ಕೆ.ಎಸ್.ಸುರೇಶ್, ಪೌರಾಯುಕ್ತ ಚಂದ್ರಪ್ಪ, ಡಾ.ಎನ್.ಕಾಶಿ, ಜಿಲ್ಲಾ ಗೌರವಾಧ್ಯಕ್ಷ ಲೋಕೇಶ್, ರಾಜ್ಯಪರಿಷತ್ ಸದಸ್ಯ ಭಾಗೇಶ್‌ಉಗ್ರಣ, ಜಿಲ್ಲಾ ಕಾರ್ಯದರ್ಶಿ ಎಸ್.ಕೆ.ಮಂಜುನಾಥ, ತಾಲ್ಲೂಕು ರಾಜ್ಯಪರಿಷತ್ ಸದಸ್ಯ ಎಸ್.ಕೆ.ಬಸವರಾಜು, ಗೌರವಾಧ್ಯಕ್ಷ ಎಸ್.ಬಿ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಉಮೇಶ್, ರಾಜ್ಯಸಂಘಟನಾ ಕಾರ್ಯದರ್ಶಿ ಸಿ.ಟಿ.ವೀರೇಶ್, ಡಿ.ದಯಾನಂದ, ಎಸ್.ಭೀಮರಾಜ್, ವೆಂಕಟಲಕ್ಷ್ಮಿ, ತಿಪ್ಪೀರಮ್ಮ, ಶ್ವೇತ ಮುಂತಾದವರು ಉಪಸ್ಥಿತರಿದ್ದರು.